ಹೊಸದಿಗಂತ ಡಿಜಿಟಲ್ ಡೆಸ್ಕ್:
ರಸಗೊಬ್ಬರ ಪೂರೈಕೆಯಲ್ಲಿ ರಾಜ್ಯ ಸರ್ಕಾರ ವಿಫಲವಾಗಿದ್ದು, ಎಲ್ಲಿಯೂ ರಸಗೊಬ್ಬರ ಸಿಗದ ಹಿನ್ನೆಲೆಯಲ್ಲಿ ಆಕ್ರೋಶಗೊಂಡ ರೈತನೊಬ್ಬ ಮಣ್ಣು ತಿಂದು ಪ್ರತಿಭಟನೆ ನಡೆಸಿದ ಘಟನೆ ಕೊಪ್ಪಳದಲ್ಲಿ ನಡೆದಿದೆ.
ಕುಣಿಕೇರಿ ತಾಂಡಾದ ಚಂದ್ರಪ್ಪ ಮತ್ತು ನೂರಾರು ರೈತರು ಯೂರಿಯಾ ಖರೀದಿಸಲು ಕೊಪ್ಪಳ ಎಪಿಎಂಸಿಯಲ್ಲಿ ಸಾಲುಗಟ್ಟಿ ನಿಂತಿದ್ದರು. ಶನಿವಾರ ಬೆಳಿಗ್ಗೆ 4 ಗಂಟೆಯಿಂದ ಸಂಜೆ 4 ಗಂಟೆಯವರೆಗೆ ರಸಗೊಬ್ಬರಕ್ಕಾಗಿ ಸರತಿ ಸಾಲಿನಲ್ಲಿ ನಿಂತಿದ್ದರು. ಆದರೆ, ಹಲವು ಗಂಟೆಗಳ ಕಾಲ ನಿಂತರೂ ಗೊಬ್ಬರ ಸಿಗದ ಕಾರಣ ಬರಿಗೈಯಲ್ಲಿ ವಾಪಸ್ಸಾಗಬೇಕಾಯಿತು.
ಇದರಿಂದ ಸಿಟ್ಟಿಗೆದ್ದ ರೈತರು ಮಣ್ಣು ತಿಂದು ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ರೈತ ಚಂದ್ರಪ್ಪ ಮಣ್ಣು ತಿಂದು ಪ್ರತಿಭಟನೆ ನಡೆಸುತ್ತಿರುವ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದು, ಸರ್ಕಾರದ ವಿರುದ್ಧ ಹಲವು ಟೀಕೆಗಳು ವ್ಯಕ್ತವಾಗುತ್ತಿವೆ.
ಹೊಲಗಳಿಗೆ ರಸಗೊಬ್ಬರ ಹಾಕಲು ಇದು ಸೂಕ್ತ ಸಮಯವಾಗಿದೆ. ಆದರೆ, ಸರ್ಕಾರ ನೀಡುತ್ತಿಲ್ಲ. ಸೂಕ್ತ ಸಮಯಕ್ಕೆ ರಸಗೊಬ್ಬರ ಸಿಗದಿದ್ದರೆ ನಾವು ಮಣ್ಣು ತಿನ್ನಬೇಕಾಗುತ್ತದೆ. ಸರ್ಕಾರ ನಮಗೆ ರಸಗೊಬ್ಬರ ಒದಗಿಸಬೇಕೆಂದು ರೈತ ಚಂದ್ರಪ್ಪ ಅವರು ಹೇಳಿದ್ದಾರೆ.