Friday, October 3, 2025

ಭಕ್ತಿ ಪರಾಕಾಷ್ಠೆಯಿಂದ ನಡೆದ ಚೌಡೇಶ್ವರಿ ದೇವಿ ಮುಳ್ಳುಗದ್ದಿಗೆ ಉತ್ಸವ

ಹೊಸದಿಗಂತ ತುಮಕೂರು :

ನಾಡಿನ ಶಕ್ತಿದೇವತೆಗಳಲ್ಲಿ ಒಂದಾದ ತುಮಕೂರು ಜಿಲ್ಲೆಯ ತಿಪಟೂರು ತಾಲ್ಲೂಕಿನ ದಸರೀಘಟ್ಟದ ಆದಿಚುಂಚನಗಿರಿ ಶಾಖಾಮಠದ ಶ್ರೀ ಚೌಡೇಶ್ವರಿ ದೇವಿಯ ಮುಳ್ಳುಗದ್ದಿಗೆ ಉತ್ಸವ ಆಳೆತ್ತರದ ಗಟ್ಟಿಕಾರೆಮುಳ್ಳಿನ ರಾಶಿಯ ಮೇಲೆ ವಿಜಯದಶಮಿಯ ಗುರುವಾರ ಅತ್ಯಂತ ವೈಭವ ಮತ್ತು ಭಕ್ತಿ ಪರಾಕಾಷ್ಠೆಯಿಂದ ನಡೆಯಿತು.

ಮುಳ್ಳು ಗದ್ದುಗೆ ವಿಶೇಷ : ಸುಮಾರು 7-8 ಅಡಿಯಷ್ಟು ಉದ್ದ-ಅಗಲದ ಜಾಗದಲ್ಲಿ ಅಳೆತ್ತರದಷ್ಟು ಗಟ್ಟಿ ಕಾರೆಮುಳ್ಳಿನ ಗಿಡಗಳನ್ನು ರಾಶಿ ಹಾಕಲಾಗುತ್ತದೆ. ಈ ಮುಳ್ಳಿನ ರಾಶಿಯ ಮೇಲೆ ಚೌಡೇಶ್ವರಿ ದೇವಿಯವರ ಉತ್ಸವ ಮೂರ್ತಿಯನ್ನು ಆರೇಳು ಭಕ್ತರು ಹೊತ್ತುಕೊಂಡ ಅತ್ಯಂತ ಭಕ್ತಿಶ್ರದ್ಧೆಯಿಂದ ಸರಾಗವಾಗಿ ಮುಳ್ಳಿನ ರಾಶಿಯನ್ನು ತುಳಿಯುತ್ತಾ ಒಂದು ಭಾಗದಿಂದ ಮತ್ತೊಂದು ಭಾಗಕ್ಕೆ ಮೂರು ಬಾರಿ ಹತ್ತಿ ನಡೆಯುತ್ತಾರೆ. ಇದರ ಜೊತೆಗೆ ಹರಕೆ ಮಾಡಿಕೊಂಡ ಭಕ್ತ ಸಮೂಹವೂ ದೇವಿಯ ಹಿಂದೆ ನಡೆದುಕೊಂಡು ಹೋಗುವ ಮೂಲಕ ತಮ್ಮ ಹರಕೆ ತೀರಿಸಿ ಧನ್ಯತಾಬಾವ ಮೆರೆಯುತ್ತಾರೆ.

ಸಮಾರಂಭದಲ್ಲಿ ಆದಿಚುಂಚನಗಿರಿ ಪೀಠಾಧ್ಯಕ್ಷ ಡಾ. ನಿರ್ಮಲಾನಂದನಾಥ ಸ್ವಾಮೀಜಿ, ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ಪ್ರಧಾನ ಕಾರ್ಯದರ್ಶಿ ಪ್ರಸನ್ನನಾಥ ಸ್ವಾಮೀಜಿ, ದಸರೀಘಟ್ಟ ಶಾಖಾಮಠದ ಚಂದ್ರಶೇಖರನಾಥ ಸ್ವಾಮೀಜಿ, ಹಾಸನ ಶಾಖಾಮಠದ ಶ್ರೀ ಶಂಭುನಾಥ ಸ್ವಾಮೀಜಿ, ಚಿಕ್ಕಬಳ್ಳಾಪುರದ ಮಂಗಳನಾಥ ಸ್ವಾಮೀಜಿ, ಚೈತನ್ಯನಾಥ ಸ್ವಾಮೀಜಿ, ಬಿ.ಜಿ.ನಗರದ ಸತ್ಕೀರ್ತಿನಾಥ ಸ್ವಾಮೀಜಿ, ಮಠದ ಟ್ರಸ್ಟಿಗಳಾದ ಡಾ. ಜಿತೇಂದ್ರ ಕುಮಾರ್, ರವಿ ಸಿದ್ಧಪ್ಪ, ರಾಮಕೃಷ್ಣಪ್ಪ, ಗುಡಿಗೌಡ ಕುಮಾರಸ್ವಾಮಿ ಸೇರಿದಂತೆ ಗ್ರಾಮಸ್ಥರು, ಸಾಹಸ್ರಾರು ಮಂದಿ ಭಕ್ತಾಧಿಗಳು ಭಾಗವಹಿಸಿದ್ದರು.