ಹೊಸದಿಗಂತ ಡಿಜಿಟಲ್ ಡೆಸ್ಕ್:
ಬಹುಮಹಡಿ ಕಟ್ಟಡದಲ್ಲಿ ಸಂಭವಿಸಿದ ಬೆಂಕಿ ದುರಂತದಲ್ಲಿ 50ಕ್ಕೂ ಹೆಚ್ಚು ಮಂದಿ ಸುಟ್ಟು ಬೂದಿಯಾಗಿರುವ ಘಟನೆ ವಿಯೆಟ್ನಾಂನ ಹನೋಯಿಯಲ್ಲಿ ನಡೆದಿದೆ. ಈ ಕಟ್ಟಡ ಒಂಬತ್ತು ಅಂತಸ್ತಿನದಾಗಿದ್ದು, ದುರಂತದಲ್ಲಿ ಹತ್ತಾರು ಜನ ಗಾಯಗೊಂಡಿದ್ದಾರೆ.
ಥಾನ್ ಕ್ಸುವಾನ್‌ನಲ್ಲಿ ನಡೆದ ಈ ಅಪಘಾತಕ್ಕೆ ಕಾರಣಗಳು ಇನ್ನೂ ತಿಳಿದುಬಂದಿಲ್ಲ. ಈ ಅಪಾರ್ಟ್‌ಮೆಂಟ್‌ನಲ್ಲಿ 45 ಕುಟುಂಬಗಳು ವಾಸಿಸುತ್ತಿವೆ. ಮಂಗಳವಾರ ರಾತ್ರಿ 11.30ರ ಸುಮಾರಿಗೆ ಈ ಅವಘಡ ಸಂಭವಿಸಿದ್ದು, ಪ್ರಾಣಹಾನಿ ಹೆಚ್ಚಾಗಿತ್ತು. ರಾತ್ರಿ ವೇಳೆ ಅನಾಹುತ ಸಂಭವಿಸಿದ್ದರಿಂದ ಸಾವಿನ ಸಂಖ್ಯೆ ಹೆಚ್ಚಾಗಿದೆ. ಬಹುತೇಕ ಎಲ್ಲರೂ ಮನೆಯಲ್ಲೇ ಇದ್ದರು ಎನ್ನಲಾಗಿದೆ. ಅಗ್ನಿಶಾಮಕ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ಬೆಂಕಿ ನಂದಿಸಿದ್ದಾರೆ.
ಕಟ್ಟಡವು ಕಿರಿದಾದ ಓಣಿಯಲ್ಲಿದ್ದು, ಪರಿಹಾರ ಕಾರ್ಯಕ್ಕೆ ತೊಂದರೆಯಾಗಿದೆ. ಕಿರಿದಾದ ಓಣಿಯಾಗಿರುವುದರಿಂದ ಸುಮಾರು 400 ಮೀಟರ್ ದೂರದಲ್ಲಿ ಅಗ್ನಿಶಾಮಕ ವಾಹನಗಳನ್ನು ನಿಲ್ಲಿಸಿ ಬೆಂಕಿ ನಂದಿಸಬೇಕಾಯಿತು. ಈ ಅಪಘಾತದ ಕುರಿತು ಹೆಚ್ಚಿನ ವಿವರಗಳು ಇನ್ನಷ್ಟೇ ತಿಳಿಯಬೇಕಿದೆ.