ಹೊಸದಿಗಂತ ಡಿಜಿಟಲ್ ಡೆಸ್ಕ್:
ಕೋಲಾರದ ಆನಂದ ಮಾರ್ಗ ಆಶ್ರಮದ ಜಮೀನು ವಿವಾದದ ಹಿನ್ನೆಲೆಯಲ್ಲಿ ಇಬ್ಬರು ಸ್ವಾಮೀಜಿಗಳ ನಡುವೆ ಮಾರಾಮಾರಿ ನಡೆದಿದ್ದು, ಹಿರಿಯ ಸ್ವಾಮೀಜಿಯನ್ನು ಮತ್ತೊಬ್ಬ ಸ್ವಾಮೀಜಿ ಭೀಕರವಾಗಿ ಹಲ್ಲೆ ಮಾಡಿ ಕೊಲೆ ಮಾಡಿದ್ದಾರೆ.
ಆಶ್ರಮದ ಜಮೀನು ವಿವಾದದ ಕುರಿತು ಎರಡು ಗುಂಪುಗಳ ನಡುವೆ ಗಲಾಟೆ ನಡೆದಿದೆ. ಗಲಾಟೆಯಲ್ಲಿ ಹಲ್ಲೆ ಗೊಳಗಾದ ಓರ್ವ ಸ್ವಾಮಿಜಿ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾರೆ. ಕೋಲಾರ ಜಿಲ್ಲೆ ಮಾಲೂರು ತಾಲ್ಲೂಕು ಸಂತಳ್ಳಿ ಗ್ರಾಮದಲ್ಲಿ ಘಟನೆ ಸಂಭವಿಸಿದೆ. ಕೊಲೆಯಾದವರು ಆಚಾರ್ಯ ಚಿನ್ಮಯಾನಂದ ಅವದೂರ್ ಸ್ವಾಮೀಜಿ (65) ಎನ್ನುವವರಾಗಿದ್ದಾರೆ. ಆಚಾರ್ಯ ಧರ್ಮ ಪ್ರಾಣಾನಂದ ಸ್ವಾಮೀಜಿ ಅವರ ಗುಂಪಿನಿಂದ ಕೊಲೆ ಮಾಡಲಾಗಿದೆ ಎಂಬ ಆರೋಪ ಕೇಳಿಬಂದಿದೆ.
ಮಾಲೂರು ತಾಲ್ಲೂಕು ಸಂತಳ್ಳಿ ಗ್ರಾಮದಲ್ಲಿರುವ 4 ಎಕರೆ ಆಶ್ರಮದ ಜಾಗಕ್ಕಾಗಿ ವಿವಾದ ನಡೆಯುತ್ತಿತ್ತು. ಕಳೆದ ಹಲವು ವರ್ಷಗಳಿಂದ ವಿವಾದ ಕೋರ್ಟ್ ಮೆಟ್ಟಿಲೇರಿತ್ತು. ಇಂದು ಬೆಳಿಗ್ಗೆ ಕೋರ್ಟ್ ಗೆ ದಾಖಲೆ ಸಹಿತ ಹೋಗುವ ವೇಳೆ ಮಾರಣಾಂತಿಕ ಹಲ್ಲೆ ಮಾಡಲಾಗಿದೆ. ಗಂಭೀರ ಗಾಯಗೊಂಡ ಚಿನ್ಮಯಾನಂದ ಅವರು ಕೋಲಾರದ ಆರ್.ಎಲ್.ಜಾಲಪ್ಪ ಆಸ್ಪತ್ರೆಗೆ ರವಾನಿಸಲಾಗಿತ್ತು. ಆದರೆ, ಚಿಕಿತ್ಸೆಗೆ ಸ್ಪಂದಿಸದೇ ಸ್ವಾಮೀಇ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾರೆ.
ಆಚಾರ್ಯ ಧರ್ಮ ಪ್ರಾಣಾನಂದ ಹಾಗೂ ಅರುಣ್ ಎಂಬುವರನ್ನು ಮಾಲೂರು ಪೊಲೀಸರು ಬಂಧಿಸಿದ್ದಾರೆ.