ಹೊಸದಿಗಂತ ವರದಿ ಹುಬ್ಬಳ್ಳಿ:
ಹಳೇ ಹುಬ್ಬಳ್ಳಿ ಆಸಾರ ಕಾಲೋನಿ ಶ್ರೀ ಭವಾನಿ ಶಂಕರ ನಾರಾಯಣ ದೇವಸ್ಥಾನ ಪುಷ್ಕರಣಿ ರಕ್ಷಿಸುವಂತೆ ಹಾಗೂ ರಸ್ತೆ ತೆರವು ಮಾಡುವಂತೆ ಆಗ್ರಹಿಸಿ ಶ್ರೀ ಭವಾನಿ ಶಂಕರ ನಾರಾಯಣ ದೇವಸ್ಥಾನ ಪುಷ್ಕರಣಿ ಸಮಿತಿ ವತಿಯಿಂದ ಬೃಹತ್ ಪ್ರತಿಭಟನೆ ನಡೆಯಿತು.

ಇಲ್ಲಿಯ ನಗರದ ಚನ್ನಪೇಟ ನಲ್ಲಿ ಸಮಾವೇಶಗೊಂಡ ಸಾವಿರಾರೂ ಪ್ರತಿಭಟನಾಕಾರರು ಹಿಂದು ವಿರೋಧಿ ರಾಜ್ಯ ಸರ್ಕಾರ, ಮಹಾನಗರ ಪಾಲಿಕೆ, ಪುರಾತತ್ವ ಇಲಾಖೆ ವಿರುದ್ಧ ಘೋಷಣೆ ಕೂಗಿದರು. ಜೈ ಶ್ರೀರಾಮ, ಜೈ ಶಂಕರಭವಾನಿ ಶಂಕರ ಎಂಬ ಘೋಷಣೆ ಗಳು ಮುಗಿಲು ಮುಟ್ಟಿದವು. ಪ್ರತಿಭಟನಾಕಾರರು ಮೆರವಣಿಗೆ ನಡೆಸದಂತೆ ನಾಲ್ಕು ದಿಕ್ಕಿನಲ್ಲಿ ಬ್ಯಾರಿಕೇಡ್ ಅಳವಡಿಸಿ, ಬಾರಿ ಪೊಲೀಸ್ ಬಂದೋಬಸ್ತ್ ಮಾಡಲಾಗಿತ್ತು. ಇನ್ನು ಪ್ರತಿಭಟನಕಾರರು ಬ್ಯಾರೆಕೇಟ್ ತಳ್ಳಿ ಮುಂದೆ ಸಾಗಲು ಮುಂದಾದಾಗ ಪೊಲೀಸರು ಶಾಸಕ ಮಹೇಶ್ ಟೆಂಗಿನಕಾಯಿ, ಪ್ರದೀಪ ಶೆಟ್ಟರ, ಅರವಿಂದ ಬೆಲ್ಲದ, ಶ್ರೀರಾಮ ಸೇನೆಯ ಪ್ರಮೋದ ಮುತಾಲಿಕ್ ಸೇರಿದಂತೆ ಹೋರಾಟಗಾರರನ್ನು ವಂಶಕ್ಕೆ ಪಡೆದು ಕರೆದೊಯ್ದುರು.

ದೇವಸ್ಥಾನ ಪುಷ್ಕರಣಿ ಜಾಗದಲ್ಲಿ ರಸ್ತೆ ನಿರ್ಮಿಸಿರುವುದನ್ನು ತೆರವು ಗೊಳಿಸಿ, ಉತ್ಖನ ಮಾಡುವರೆಗೂ ಹೋರಾಟ ನಿರಂತರ ಮಾಡುವುದಾಗಿ ಹೋರಾಟಗಾರರು ಎಚ್ಚರಿಕೆ ನೀಡಿದರು. ಶಾಸಕರಾದ ಅರವಿಂದ ಬೆಲ್ಲದ, ಮಹೇಶ ಟೆಂಗಿನಕಾಯಿ, ಶ್ರೀರಾಮ ಸೇನೆ ಪ್ರಮೋದ ಮುತಾಲಿಕ್ ಮಾತನಾಡಿ, ಮಹಾನಗರ ಪಾಲಿಕೆ, ಪುರಾತತ್ವ ಇಲಾಖೆ ಹಾಗೂ ಪೊಲೀಸ್ ಇಲಾಖೆ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು.
ಸಮಿತಿ ಸಂಚಾಲಕ ಸುಧಾಕರ ಶೆಟ್ಟಿ, ಸಹ ಸಂಚಾಲಕ ಜಯತೀರ್ಥ ಕಟ್ಟಿ, ದತ್ತಮೂರ್ತಿ ಕುಲಕರ್ಣಿ, ಸಂತೋಷ ಚವ್ಹಾಣ, ಶಿವು ಮೆಣಸಿನಕಾಯಿ, ಬಸವರಾಜ ಕುಂದಗೋಳಮಠ, ಪ್ರಭು ನವಲಗುಂದಮಠ ಸೇರಿದಂತೆ ಸಾವಿರಾರು ಜನರಿದ್ದರು. ಪೊಲೀಸ್ ಬೀಗಿ ಬಂದೋಬಸ್ತ್ ವಹಿಸಲಾಗಿತ್ತು.



