ಹೊಸದಿಗಂತ ವರದಿ, ಮದ್ದೂರು :
ನನ್ನ ರಾಜಕೀಯ ಜೀವನದಲ್ಲಿ ನೀರಾವರಿ ಯೋಜನೆಗಳ ಪರವಾಗಿ ಸಾಕಷ್ಟು ಹೋರಾಟ ನಡೆಸಿದ್ದರೂ ಮೇಕೆದಾಟು ಪಾದಯಾತ್ರೆ ನಡೆಸಿದ ಒಬ್ಬ ಮುಖಂಡರೂ ನನ್ನ ಹೆಸರೇಳದಿರುವುದು ಮನಸ್ಸಿಗೆ ತುಂಬಾ ನೋವುಂಟುಮಾಡಿದೆ ಎಂದು ಕಾಂಗ್ರೆಸ್ ನಾಯಕರ ಬಗ್ಗೆ ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರು ಅಸಮಾಧಾನ ವ್ಯಕ್ತಪಡಿಸಿದರು.
ಪಟ್ಟಣದ ಮದ್ದೂರು ಕ್ರೀಡಾಂಗಣದಲ್ಲಿ ಸೋಮವಾರ ಕೆ.ಟಿ.ಚಂದು ಅಭಿನಂದನಾ ಸಮಿತಿ ಹಾಗೂ ಸಂಸ್ಥೆಯ ಹಿರಿಯ ವಿದ್ಯಾರ್ಥಿಗಳ ಸಂಘ ಆಯೋಜಿಸಿದ್ದ ಅಪರೂಪ ಗೌರವ ಗ್ರಂಥ ಬಿಡುಗಡೆ ಮತ್ತು ಕೆ.ಟಿ.ಚಂದು ಅಭಿನಂದನಾ ಸಮಾರಂಭ ಉದ್ಘಾಟಿಸಿ ಮಾತನಾಡಿದರು.
ಮೇಕೆದಾಟು ಅಣೆಕಟ್ಟನ್ನು ಕಟ್ಟುತ್ತೇವೆ ಎಂದು ಪಾದಯಾತ್ರೆ ಮಾಡಿದ ಒಬ್ಬ ಪುಣ್ಯಾತ್ಮ ನನ್ನ ಹೆಸರೇಳಿದ್ದರೆ ಸಾಕಾಗುತ್ತಿತ್ತು. ದುರಂತವೆಂದರೆ ಆ ಹೋರಾಟದಲ್ಲಿ ತೊಡಗಿದ್ದ ಒಬ್ಬನೇ ಒಬ್ಬನೂ ನನ್ನ ಹೆಸರು ಹೇಳಲಿಲ್ಲ. ಇದನ್ನು ನೋಡಿದಾಗ ನಾನು ಯಾವ ಸಮಾಜಕ್ಕೆ ಸೇರಿದ್ದೇನೆ ಎನ್ನುವುದೇ ಗೊತ್ತಿಲ್ಲ ಎಂದು ಮಾಜಿ ಸಿಎಂ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ವಿರುದ್ಧ ಕಿಡಿಕಾರಿದರು.
ಒಕ್ಕಲಿಗ ಭಿಕ್ಷುಕನಲ್ಲ. ಅವನು ಅನ್ನ ಹಾಕುವವನು. ಕೊಡುಗೈ ದಾನಿ ಇದ್ದಂತೆ. ಅದಕ್ಕಾಗಿಯೇ ಒಕ್ಕಲಿಗ ಸಮುದಾಯದ ಏಳ್ಗೆಗಾಗಿ ನನ್ನ ರಾಜಕೀಯ ಜೀವನದುದ್ದಕ್ಕೂ ಹೋರಾಟ ನಡೆಸಿಕೊಂಡು ಬಂದಿದ್ದೇನೆ. ನನ್ನ ಹೋರಾಟ ನಿರಂತರವಾಗಿರುತ್ತದೆ. ಅದರಿಂದ ಹಿಂದೆ ಬೀಳುವ ಪ್ರಶ್ನೆಯೇ ಇಲ್ಲ ಎಂದು ಖಡಕ್ಕಾಗಿ ಹೇಳಿದರು.