Thursday, October 23, 2025

ಪ್ರಿಯಾಂಕ್ ಖರ್ಗೆ ಮೇಲೆ ಕೇಸ್ ದಾಖಲಿಸಿ, ವಜಾ ಮಾಡಿ: ಅಶ್ವಥ್ ನಾರಾಯಣ್ ಆಗ್ರಹ

ಹೊಸದಿಗಂತ ಡಿಜಿಟಲ್ ಡೆಸ್ಕ್:

RSS ಚಟುವಟಿಕೆಗಳನ್ನು ನಿಷೇಧಿಸುವ ಬಗ್ಗೆ ಮುಖ್ಯಮಂತ್ರಿಗಳಿಗೆ ಪತ್ರ ಬರೆದ ಸಚಿವ ಪ್ರಿಯಾಂಕ್ ಖರ್ಗೆ ಅವರ ವಿರುದ್ಧ ಬಿಜೆಪಿ ಶಾಸಕ ಡಾ. ಸಿ.ಎನ್. ಅಶ್ವಥ್ ನಾರಾಯಣ್ ಅವರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ವಿಚಾರವಾಗಿ ಮಾತನಾಡಿರುವ ಅವರು, “ಸರ್ಕಾರಕ್ಕೆ ನೈತಿಕತೆ ಇದ್ದರೆ ಪ್ರಿಯಾಂಕ್ ಖರ್ಗೆ ಮೇಲೆ ಕೇಸ್ ದಾಖಲಿಸಬೇಕು,” ಎಂದು ಆಗ್ರಹಿಸಿದ್ದಾರೆ.

ಬಿಜೆಪಿ ಕಚೇರಿಯಲ್ಲಿ ಇಂದು ಮಾತನಾಡಿದ ಅಶ್ವಥ್ ನಾರಾಯಣ್ ಅವರು, ಇಂತಹ ಘನಂದಾರಿ ಕೆಲಸ ಮಾಡಿರುವ ಪ್ರಿಯಾಂಕ್ ಖರ್ಗೆಯವರನ್ನು ಈ ಪತ್ರ ನೀಡಿದ ಕೂಡಲೇ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸಚಿವ ಸ್ಥಾನದಿಂದ ವಜಾ ಮಾಡಬೇಕಿತ್ತು ಎಂದು ಹೇಳಿದ್ದಾರೆ.

ಸಚಿವ ಪ್ರಿಯಾಂಕ್ ಖರ್ಗೆ ಅವರ ಕಾರ್ಯವೈಖರಿ ಕುರಿತು ಟೀಕಿಸಿದ ಅಶ್ವಥ್ ನಾರಾಯಣ್, “ಸನ್ಮಾನ್ಯ ಪ್ರಿಯಾಂಕ್ ಖರ್ಗೆ ಯಾವಾಗಲೂ ಅಪ್ರಸ್ತುತ ಹೇಳಿಕೆಗಳನ್ನು ಕೊಟ್ಟು ಸುದ್ದಿಯಲ್ಲಿರುವ ಮಂತ್ರಿ. ಅವರಿಗೆ ಯಾವಾಗಲೂ ಪ್ರಚಾರದಲ್ಲಿರುವ ಗೀಳು. ಅವರು ಏನು ಮಾತಾಡುತ್ತಿದ್ದಾರೆ ಅನ್ನೋದೇ ಅವರಿಗೆ ಗೊತ್ತಿಲ್ಲ,” ಎಂದು ಕಿಡಿಕಾರಿದರು.

ಪ್ರಿಯಾಂಕ್ ಖರ್ಗೆ ಅವರ ಅರ್ಹತೆಯ ಬಗ್ಗೆ ಪ್ರಶ್ನೆ ಎತ್ತಿದ ಬಿಜೆಪಿ ಶಾಸಕರು, “ಇವರಿಗೆ ಮಲ್ಲಿಕಾರ್ಜುನ ಖರ್ಗೆಯವರ ಮಗ ಎನ್ನುವುದಷ್ಟೇ ಅರ್ಹತೆ. ಜ್ಞಾನ ಇಲ್ಲದಿದ್ದರೂ ಕುಳಿತಲ್ಲೇ ಅಧಿಕಾರ ಮಾಡುತ್ತಾರೆ. ಬರೀ ವಂಶಪಾರಂಪರ್ಯವಾಗಿ ಬಂದಿರುವವರಿಗೆ ಯಾವ ಅರ್ಹತೆ ಇದೆ,” ಎಂದು ಕುಟುಕಿದರು.

“ನಿಮ್ಮ ಸಾಧನೆ ಹಾಗೂ ಕೆಲಸ ಮಾತಾಡಬೇಕು. ಪ್ರಿಯಾಂಕ್ ಖರ್ಗೆ ಅವರೇ ಸಮಾಜ ಒಡೆಯುವ ಕೆಲಸ ಮಾಡಬೇಡಿ. ಬದಲಾಗಿ ಬಾಂಧವ್ಯ ಮತ್ತು ಗೌರವವನ್ನು ಹೆಚ್ಚಿಸಿ,” ಎಂದು ಅಶ್ವಥ್ ನಾರಾಯಣ್ ಅವರು ಕಿವಿಮಾತು ಹೇಳಿದ್ದಾರೆ.

error: Content is protected !!