ಹೊಸದಿಗಂತ ವರದಿ, ಮಡಿಕೇರಿ:
ಕಾಶ್ಮೀರದಲ್ಲಿ ಹಿಮಪಾತಕ್ಕೆ ಸಿಲುಕಿ ಹುತಾತ್ಮರಾದ ವೀರಾಜಪೇಟೆಯ ಯೋಧ ಅಲ್ತಾಫ್ ಅಹಮ್ಮದ್ (37) ಅವರ ಅಂತ್ಯಕ್ರಿಯೆ ಸಕಲ ಸರ್ಕಾರಿ ಮತ್ತು ಸೇನಾ ಗೌರವದೊಂದಿಗೆ ಶನಿವಾರ ವೀರಾಜಪೇಟೆಯಲ್ಲಿ ನೆರವೇರಿತು.
ಶನಿವಾರ ಬೆಳಗ್ಗೆ ವೀರಾಜಪೇಟೆಗೆ ತಲುಪಿದ ಪಾರ್ಥೀವ ಶರೀರದ ಸಾರ್ವಜನಿಕ ದರ್ಶನಕ್ಕೆ ಅಲ್ಲಿನ ತಾಲೂಕು ಮೈದಾನದಲ್ಲಿ ವ್ಯವಸ್ಥೆ ಮಾಡಲಾಗಿತ್ತು.
ಶಾಸಕ ಕೆ.ಜಿ.ಬೋಪಯ್ಯ, ವಿಧಾನ ಪರಿಷತ್ ಸದಸ್ಯೆ ವೀಣಾ ಅಚ್ಚಯ್ಯ, ಜಿಲ್ಲಾಧಿಕಾರಿ ಡಾ.ಬಿ.ಸಿ.ಸತೀಶ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಯ್ಯಪ್ಪ, ಯೋಧನ ಕುಟುಂಬಸ್ಥರು ಮತ್ತು ಅಧಿಕಾರಿಗಳು, ನಿವೃತ್ತ ಯೋಧರು, ಜನಪ್ರತಿನಿಧಿಗಳು, ಸಾರ್ವಜನಿಕರು ಯೋಧನಿಗೆ ಅಂತಿಮ ನಮನ ಸಲ್ಲಿಸಿದರು.
ಭಾರತೀಯ ಸೇನೆ, ಜಿಲ್ಲಾಡಳಿತ, ಜಿಲ್ಲಾ ಪೊಲೀಸ್ ಇಲಾಖೆಯಿಂದ 21 ಸುತ್ತು ಕುಶಲತೋಪು ಸಿಡಿಸಿ ಯೋಧ ಅಲ್ತಾಫ್ ಅಹ್ಮದ್‌ಗೆ ಗೌರವ ಸಲ್ಲಿಸಲಾಯಿತು. ಸೇನೆಯ ಡಿಎಸ್‌ಸಿ ವಿಭಾಗದಿಂದ ಗೌರವ ನಮನ ಸಲ್ಲಿಸಲಾಯಿತು.
ಕುಸಿದು ಬಿದ್ದ ಪತ್ನಿ: ಅಲ್ತಾಫ್ ಕುಟುಂಬಕ್ಕೆ ಸೇನೆಯಿಂದ ತಿರಂಗ ಧ್ವಜ ಹಸ್ತಾಂತರ ಮಾಡುವ ವೇಳೆ ಯೋಧನ ಪತ್ನಿ ಜುಬೇರಿಯಾ ಕುಸಿದು ಬಿದ್ದ ದೃಶ್ಯ ಮನಕಲುಕುವಂತಿತ್ತು.
ವೀರಾಜಪೇಟೆ ತಾಲ್ಲೂಕು ಮೈದಾನದಿಂದ ಇದ್ಗಾ ಮೈದಾನಕ್ಕೆ ಯೋಧನ ಮೆರವಣಿಗೆ ನಡೆಯಿತು. ನಂತರ ಇದ್ಗಾ ಮೈದಾನದಲ್ಲಿ ಅಂತ್ಯಕ್ರಿಯೆ ನೆರವೇರಿಸಲಾಯಿತು.
ಫೆ.23ರಂದು ಹುತಾತ್ಮ: ಫೆಬ್ರವರಿ 23ರಂದು ಶ್ರಿನಗರದಲ್ಲಿ ಹಿಮಪಾತಕ್ಕೆ ಸಿಲುಕಿ ಹವಾಲ್ದಾರ್ ಅಲ್ತಾಫ್ ಅಹ್ಮದ್ ಹುತಾತ್ಮರಾಗಿದ್ದರು.
ಅಲ್ತಾಫ್ ವೀರಾಜಪೇಟೆಯ ಮೀನುಪೇಟೆಯಲ್ಲಿ ಹುಟ್ಟಿ ಬೆಳೆದವರು. ಅಲ್ತಾಫ್ ಅಹಮ್ಮದ್ ಅವರು ವೀರಾಜಪೇಟೆಯ ಸಂತ ಅನ್ನಮ್ಮ ವಿದ್ಯಾಸಂಸ್ಥೆಯಲ್ಲಿ ಶಾಲಾ ಶಿಕ್ಷಣ ಪೂರ್ಣಗೊಳಿಸಿದ್ದರು. ಬಳಿಕ ಅಲ್ಲಿನ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಪಿಯು ಶಿಕ್ಷಣ ಪಡೆದಿದ್ದರು ನಂತರ ಸೇನಾ ನೇಮಕಾತಿ ರ್‍ಯಾಲಿಯಲ್ಲಿ ಪಾಲ್ಗೊಂಡು ಭಾರತೀಯ ಸೇನೆಗೆ ಆಯ್ಕೆಗೊಂಡಿದ್ದರು.
ವೀರಾಜಪೇಟೆಯ ಮೀನುಪೇಟೆಯಲ್ಲಿ ವಾಸವಾಗಿದ್ದ ದಿ.ಉಮ್ಮರ್ ಮತ್ತು ಆಶೀಯಾ ದಂಪತಿ ಪುತ್ರ ಅಲ್ತಾಫ್ ಅಹಮ್ಮದ್ ಪತ್ನಿ, ಪುತ್ರ ಹಾಗೂ ಪುತ್ರಿಯನ್ನು ಅಗಲಿದ್ದಾರೆ.