ಹೊಸದಿಗಂತ ಡಿಜಿಟಲ್ ಡೆಸ್ಕ್:
ದಿಯಾ ಸಿನಿಮಾದ ನಿರ್ಮಾಪಕ ಕೃಷ್ಣಚೈತನ್ಯ ವಿರುದ್ಧ ಗಂಭೀರ ಆರೋಪ ಕೇಳಿಬಂದಿದೆ. ಬೆಳ್ಳಂದೂರು ಪೊಲೀಸ್ ಠಾಣೆಯಲ್ಲಿ ರೈತ ರಾಮಮೂರ್ತಿ ಅವರು ನೀಡಿದ ದೂರಿನ ಆಧಾರದ ಮೇಲೆ ಪೊಲೀಸರು ಎಫ್‌ಐಆರ್ ದಾಖಲಿಸಿ ತನಿಖೆ ಆರಂಭಿಸಿದ್ದಾರೆ.
ನಕಲಿ ದಾಖಲೆ ಸೃಷ್ಟಿಸಿಕೊಂಡು ಜಮೀನಿಗೆ ಅತಿಕ್ರಮ ಪ್ರವೇಶ ಮಾಡಿರುವುದು, ಅವಾಚ್ಯ ಶಬ್ದಗಳಿಂದ ನಿಂದಿಸಿರುವುದು ಮತ್ತು ಜೀವ ಬೆದರಿಕೆ ಹಾಕಿರುವುದು ಸೇರಿದಂತೆ ಹಲವಾರು ಆರೋಪಗಳನ್ನು ರಾಮಮೂರ್ತಿ ಮಾಡಿದ್ದಾರೆ.
ರಾಮಮೂರ್ತಿ ಅವರು ಕಸವನಹಳ್ಳಿಯ ಸರ್ವೆ ನಂ. 52 ರ 3.25 ಗುಂಟೆ ಜಮೀನನ್ನು 2005ರಲ್ಲಿ ಖರೀದಿಸಿದ್ದರು. ಈ ಜಮೀನನ್ನು 6 ಲಕ್ಷ ರೂಪಾಯಿ ಒಪ್ಪಂದದಡಿ ಶಶಿಕಲಾ ಕೋದಂಡಚಾರಿ ಅವರಿಗೆ ಭೋಗ್ಯಕ್ಕೆ ನೀಡಿ, ಅವರು ಅಲ್ಲಿ ನರ್ಸರಿ ನಡೆಸುತ್ತಿದ್ದರು. ಆದರೆ ಆಗಸ್ಟ್ 13ರಂದು ಕೃಷ್ಣಚೈತನ್ಯ ಹಾಗೂ ಸಹಚರರು ಈ ಜಮೀನಿನ ಬಳಿ ಬಂದು ನಕಲಿ ದಾಖಲೆ ತೋರಿಸಿ, ಶಶಿಕಲಾ ಕೋದಂಡಚಾರಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಿ, ಜೀವ ಬೆದರಿಕೆ ಹಾಕಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ.
ಇದಲ್ಲದೆ, ಜಮೀನು ಕಬಳಿಸಲು ಯೋಜನೆ ರೂಪಿಸಿರುವ ಕೃಷ್ಣಚೈತನ್ಯ ಹಾಗೂ ಸೈನಪ್ಸಿ ಕಂಪನಿ ಎಂ.ಡಿ. ಸಚಿನ್ ನಾರಾಯಣ್ ಅವರಿಗೆ ಕಂದಾಯ ಇಲಾಖೆಯ ಅಧಿಕಾರಿಗಳು, ಸಬ್ ರಿಜಿಸ್ಟ್ರಾರ್ ಹಾಗೂ ಬಿಬಿಎಂಪಿ ಅಧಿಕಾರಿಗಳು ಸಹಕಾರ ನೀಡಿದ್ದಾರೆ ಎಂಬ ಗಂಭೀರ ಆರೋಪವನ್ನು ರಾಮಮೂರ್ತಿ ಮಾಡಿದ್ದಾರೆ. ಈ ಸಂಬಂಧ ರಾಜ್ಯಪಾಲರಿಂದ ಹಿಡಿದು ಮುಖ್ಯಮಂತ್ರಿ, ಗೃಹಸಚಿವರು, ಕಂದಾಯ ಸಚಿವರು, ನಗರ ಜಿಲ್ಲಾಧಿಕಾರಿ, ಮುಖ್ಯಕಾರ್ಯದರ್ಶಿ, ಲೋಕಾಯುಕ್ತ, ಐಜಿ ರಿಜಿಸ್ಟ್ರೇಷನ್ ಸೇರಿದಂತೆ ಅನೇಕ ಉನ್ನತ ಅಧಿಕಾರಿಗಳಿಗೆ ದೂರು ಸಲ್ಲಿಸಲಾಗಿದೆ.
ಪ್ರಸ್ತುತ ಪ್ರಕರಣ ದಾಖಲಾದ ಬೆಳ್ಳಂದೂರು ಪೊಲೀಸರು, ಜಮೀನು ಮಾಲಿಕತ್ವ ಹಾಗೂ ದಾಖಲೆಗಳ ನೈಜತೆಯನ್ನು ಪರಿಶೀಲಿಸುವುದರ ಜೊತೆಗೆ ಆರೋಪಿಗಳ ವಿರುದ್ಧ ತನಿಖೆ ಮುಂದುವರಿಸಿದ್ದಾರೆ.