ಹೊಸದಿಗಂತ ಡಿಜಿಟಲ್ ಡೆಸ್ಕ್:
ಜಮ್ಮು ಮತ್ತು ಕಾಶ್ಮೀರದ ಆಮ್ ಆದ್ಮಿ ಪಕ್ಷದ ಶಾಸಕ ಮೆಹ್ರಾಜ್ ಮಲಿಕ್ ವಿರುದ್ಧ ಮಹಿಳಾ ವೈದ್ಯೆಯೊಬ್ಬರು ಗಂಭೀರ ಆರೋಪ ಮಾಡಿದ್ದಾರೆ.
ಆರೋಪಗಳ ಆಧಾರದ ಮೇಲೆ ಎಎಪಿ ಶಾಸಕನ ವಿರುದ್ಧ ಎಫ್‌ಐಆರ್ ದಾಖಲಾಗಿದೆ. ಸಾಮಾಜಿಕ ಮಾಧ್ಯಮಗಳ ಮೂಲಕ ಅಶ್ಲೀಲ ನಿಂದನೆಗಳನ್ನು ಮಾಡಲಾಗುತ್ತಿದ್ದು ಆಸ್ಪತ್ರೆಯಲ್ಲಿ ಗದ್ದಲವೂ ಸೃಷ್ಟಿಯಾಗಿದೆ ಎಂದು ಮಹಿಳಾ ವೈದ್ಯೆ ಎಎಪಿ ಶಾಸಕನ ವಿರುದ್ಧ ಆರೋಪಿಸಿದ್ದಾರೆ.
ಎಎಪಿ ಶಾಸಕ ಮೆಹ್ರಾಜ್ ಮಲಿಕ್ ದೋಡಾದಲ್ಲಿನ ಆಸ್ಪತ್ರೆಗಳ ಕಾರ್ಯನಿರ್ವಹಣೆಯನ್ನು ಟೀಕಿಸುತ್ತಿದ್ದಾರೆ. ಜಮ್ಮು ಮತ್ತು ಕಾಶ್ಮೀರ ವಿಧಾನಸಭೆಯಲ್ಲಿಯೂ ಈ ವಿಷಯವನ್ನು ಎತ್ತಿದ್ದರು. ಈ ಬಗ್ಗೆ ಸ್ಪಷ್ಟೀಕರಣಕ್ಕೆಂದು ಕರೆ ಮಾಡಿದಾಗ ಶಾಸಕರ ಮೊಬೈಲ್ ಸ್ವಿಚ್ ಆಫ್ ಆಗಿರುವುದು ತಿಳಿದುಬಂದಿದೆ.
ತಮ್ಮ ದೂರಿನಲ್ಲಿ, ಸಾಮಾಜಿಕ ಮಾಧ್ಯಮ ವೇದಿಕೆಗಳ ಮೂಲಕ ಬೆದರಿಕೆ ಹಾಕಲಾಗುತ್ತಿದೆ ಎಂದು ವೈದ್ಯೆ ಹೇಳಿದ್ದಾರೆ. ಹಲವು ಸಂದರ್ಭಗಳಲ್ಲಿ ನಾನು ನಿಮ್ಮನ್ನು ಎಳೆದುಕೊಂಡು ಹೋಗುತ್ತೇನೆ, ನಿಮ್ಮನ್ನು ಬೆತ್ತಲೆಯಾಗಿಸುತ್ತೇನೆ ಎಂದು ಹೇಳಲಾಗಿದೆ. ಇವು ಕೇವಲ ಪದಗಳಲ್ಲ, ವೈದ್ಯೆಯಾಗಿ ನನ್ನ ಗುರುತಿನ ಮೇಲಿನ ದಾಳಿ, ನನ್ನ ಸುರಕ್ಷತೆಗೂ ದೊಡ್ಡ ಬೆದರಿಕೆ ಇದೆ. ಶಾಸಕರು ನಿರಂತರವಾಗಿ ಕಳ್ಳ, ದಲ್ಲಾಳಿ ಮತ್ತು ಕೊಲೆಗಾರ ಮುಂತಾದ ಪದಗಳನ್ನು ಬಳಸುತ್ತಿದ್ದಾರೆ ಎಂಬ ಅಂಶವನ್ನು ಪೊಲೀಸರು ಗಮನಿಸಬೇಕು ಎಂದು ಮಹಿಳೆ ತಮ್ಮ ದೂರಿನಲ್ಲಿ ತಿಳಿಸಿದ್ದಾರೆ.