ಹೊಸದಿಗಂತ ಡಿಜಿಟಲ್ ಡೆಸ್ಕ್:
ಆಪರೇಷನ್ ಸಿಂದೂರ್ ಕಾರ್ಯಾಚರಣೆ ಕುರಿತು ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ್ದ ಕರ್ನಲ್ ಸೋಫಿಯಾ ಖುರೇಷಿ ಅವರ ಪತಿ ಮನೆ ಮೇಲೆ ಆರ್ಎಸ್ಎಸ್ ಕಾರ್ಯಕರ್ತರು ದಾಳಿ ನಡೆಸಿದ್ದಾರೆ ಎಂದು ಸುಳ್ಳು ಸುದ್ದಿಯನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದ ಕಿಡಿಗೇಡಿ ವಿರುದ್ಧ ಬೆಳಗಾವಿ ಪೊಲೀಸರು ಸ್ವಯಂ ಪ್ರೇರಿತ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಬೆಳಗಾವಿ ಎಸ್ಪಿ ಭೀಮಾಶಂಕರ್ ಗುಳೇದ್ ಅವರ ಸೂಚನೆ ಮೇರೆಗೆ ಬಿಎನ್ಎಸ್ ಕಾಯ್ದೆಯಡಿ 353(2), 192 ಸೆಕ್ಷನ್ ಅಡಿಯಲ್ಲಿ ಆರೋಪಿ ಅನೀಸ್ ಉದ್ದೀನ್ ವಿರುದ್ಧ ಬೆಳಗಾವಿ ಜಿಲ್ಲಾ ಸಿಇಎನ್ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ.
ಬೆಳಗಾವಿ ಎಸ್ಪಿ ಡಾ. ಭೀಮಾಶಂಕರ ಗುಳೇದ್ ಅವರು, ಫೇಕ್ ಪೋಸ್ಟ್ ಮಾಡಿದ್ದ ಆರೋಪಿ ಅನೀಸ್ ಉದ್ದೀನ್, ಕೆನಡಾದ ಕೊಲಂಬಿಯಾ ನಿವಾಸಿ ಎಂಬುದು ದೃಢಪಟ್ಟಿದೆ ಎಂದು ತಿಳಿಸಿದ್ದರು.
ಈ ಘಟನೆಯ ಬೆನ್ನಲ್ಲೇ, ಗೋಕಾಕ್ ಪೊಲೀಸರು ಕರ್ನಲ್ ಸೋಫಿಯಾ ಖುರೇಷಿ ಅವರ ಮಾವನ ಮನೆಗೆ ಭೇಟಿ ನೀಡಿ, ಕುಟುಂಬಸ್ಥರಿಗೆ ಭದ್ರತೆ ಒದಗಿಸಿದ್ದಾರೆ
ಈ ಸುಳ್ಳು ಸುದ್ದಿಯನ್ನು ಖಂಡಿಸಿರುವ ಬೆಳಗಾವಿ ಪೊಲೀಸರು, ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಮಾಹಿತಿಯನ್ನು ಹಂಚಿಕೊಳ್ಳುವ ಮೊದಲು ಅದರ ಸತ್ಯಾಸತ್ಯತೆಯನ್ನು ಪರಿಶೀಲಿಸುವಂತೆ ಜನತೆಗೆ ಮನವಿ ಮಾಡಿದ್ದರು.