ಟಿ20 ವಿಶ್ವಕಪ್‌ ಹೀರೋ ಜೋಗಿಂದರ್‌ ಶರ್ಮ ವಿರುದ್ಧ ಎಫ್‌ಐಆರ್ ದಾಖಲು

ಹೊಸದಿಗಂತ ಡಿಜಿಟಲ್ ಡೆಸ್ಕ್:

ಟಿ20 ವಿಶ್ವಕಪ್‌ ಟೂರ್ನಿಯ ಫೈನಲ್‌ ಪಂದ್ಯದಲ್ಲಿ ಐತಿಹಾಸಿಕ ಕೊನೆಯ ಓವರ್‌ ಎಸೆದು ಪಾಕಿಸ್ತಾನ ತಂಡದ ವಿರುದ್ಧ ಭಾರತದ ಗೆಲುವಿಗೆ ಕಾರಣರಾದ ಜೋಗಿಂದರ್‌ ಶರ್ಮ ಎಲ್ಲರಿಗೂ ಗೊತ್ತೇ ಇದೆ.

ಟೀಮ್‌ ಇಂಡಿಯಾ ವಿಶ್ವಕಪ್‌ ಹೀರೋ ಆಗಿ ಮಿಂಚಿ ಬಳಿಕ ಹರಿಯಾಣ ಪೊಲೀಸ್‌ ಇಲಾಖೆಯಲ್ಲಿ ಡಿಎಸ್‌ಪಿ ಕೆಲಸ ಪಡೆದುಕೊಂಡಿದ್ದರು ಜೋಗಿಂದರ್‌ ಶರ್ಮ.

ಇದೀಗ ಅವರ ವಿರುದ್ಧಎಫ್ಐಆರ್ ದಾಖಲಾಗಿದೆ. ಆತ್ಮಹತ್ಯೆಗೆ ಪ್ರಚೋದನೆ ನೀಡಿದ ಆರೋಪದಲ್ಲಿ ಜೋಗಿಂದರ್‌ ವಿರುದ್ಧ ಎಫ್‌ಐ ಆರ್‌ ದಾಖಲು ಮಾಡಲಾಗಿದೆ. ಜೋಗಿಂದರ್ ಶರ್ಮಾ ಸೇರಿದಂತೆ ಆರು ಜನರ ವಿರುದ್ಧ ಹಿಸಾರ್‌ನ ಆಜಾದ್ ನಗರ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ.

ಹಿಸಾರ್‌ನ ದಬ್ರಾ ಗ್ರಾಮದ ಪವನ್ ಎಂಬ ವ್ಯಕ್ತಿಯನ್ನು ಆತ್ಮಹತ್ಯೆಗೆ ಪ್ರಚೋದಿಸಿದ್ದಕ್ಕಾಗಿ ಜೋಗಿಂದರ್‌ ವಿರುದ್ಧ ಪ್ರಕರಣ ದಾಖಲಾಗಿದೆ. ಅದೇ ವೇಳೆ ಜೋಗಿಂದರ್ ಈ ಬಗ್ಗೆ ತಮಗೆ ಯಾವುದೇ ಮಾಹಿತಿ ಇಲ್ಲ ಎಂದಿದ್ದಾರೆ.

ಆರೋಪಿಗಳ ವಿರುದ್ಧ ಆತ್ಮಹತ್ಯೆಗೆ ಪ್ರಚೋದನೆ ಹಾಗೂ ಎಸ್‌ಸಿ-ಎಸ್‌ಟಿ ಸೆಕ್ಷನ್‌ ಸೇರಿಸಿ ಪ್ರಕರಣ ದಾಖಲಿಸಲಾಗಿದ್ದು, ತನಿಖೆ ನಡೆಸಿ ಕ್ರಮ ಕೈಗೊಳ್ಳಲಾಗುವುದು ಎಂದು ಎಎಸ್‌ಪಿ ರಾಜೇಶ್‌ ಕುಮಾರ್‌ ಮೋಹನ್‌ ತಿಳಿಸಿದ್ದಾರೆ.

ಪವನ್ ಆತ್ಮಹತ್ಯೆಗೆ ಸಂಬಂಧಿಸಿದಂತೆ ಹಿಸಾರ್‌ನ ಆಜಾದ್ ನಗರ ಪೊಲೀಸ್ ಠಾಣೆ ಪ್ರಭಾರಿ ಸಂದೀಪ್ ಕುಮಾರ್ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಕುಟುಂಬದ ಸದಸ್ಯರು ಡಿಎಸ್‌ಪಿ ಮೇಲೂ ಆರೋಪ ಮಾಡುತ್ತಿದ್ದಾರೆ, ಈ ಬಗ್ಗೆ ಇನ್ನೂ ತನಿಖೆ ನಡೆಯುತ್ತಿದೆ.

ಏನಿದು ಘಟನೆ:
ಪಾಬ್ದ ಗ್ರಾಮದ ಸುನೀತಾ ಎಂಬುವರು ಜ.2ರಂದು ಆಜಾದ್ ನಗರ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದು, ತಮ್ಮ ಮನೆಗೆ ಸಂಬಂಧಿಸಿದಂತೆ ಅಜಯವೀರ್, ಈಶ್ವರ್ ಪ್ರೇಮ್, ರಾಜೇಂದ್ರ ಸಿಹಾಗ್ ಸೇರಿ ನ್ಯಾಯಾಲಯದಲ್ಲಿ ಪ್ರಕರಣ ನಡೆಯುತ್ತಿದೆ. ಈ ಪ್ರಕರಣದಿಂದ ಪುತ್ರ ಪವನ್ ತೀವ್ರ ನೊಂದಿದ್ದರು. ಜನವರಿ 1ರಂದು ಮಗ ಆತ್ಮಹತ್ಯೆ ಮಾಡಿಕೊಂಡಿದ್ದು, ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ. ಕುಟುಂಬಸ್ಥರ ದೂರಿನ ಮೇರೆಗೆ ಆರು ಮಂದಿ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಮಾಜಿ ಕ್ರಿಕೆಟಿಗ ಹಾಗೂ ಹಿಸಾರ್‌ ಠಾಣೆಯ ಡಿಎಸ್‌ಪಿ ಜೋಗಿಂದರ್, ಅಜಯವೀರ್, ಈಶ್ವರ್ ಪ್ರೇಮ್, ರಾಜೇಂದ್ರ ಮತ್ತಿತರರು ತಮ್ಮ ಮಗನಿಗೆ ಚಿತ್ರಹಿಂಸೆ ನೀಡಿದ್ದಾರೆ ಎಂದು ಮೃತರ ತಾಯಿ ಆರೋಪಿಸಿದ್ದಾರೆ. ಎಸ್‌ಸಿ-ಎಸ್‌ಟಿ ಸೆಕ್ಷನ್‌ ಸೇರಿಸುವುದು ಸೇರಿದಂತೆ ಆರು ಬೇಡಿಕೆಗಳನ್ನು ಕುಟುಂಬ ಸದಸ್ಯರು ಗುರುವಾರ ಎಎಸ್‌ಪಿ ಮುಂದೆ ಸಲ್ಲಿಸಿದ್ದಾರೆ. ಈ ಕುರಿತು ತಡರಾತ್ರಿಯವರೆಗೂ ಪ್ರತಿಭಟನೆ ಮುಂದುವರಿದಿತ್ತು.

ಕುಟುಂಬಸ್ಥರ ಬೇಡಿಕೆಯೇನು:
ಮೃತ ಯುವಕನ ಅಂತ್ಯಸಂಸ್ಕಾರದ ವೆಚ್ಚವನ್ನೂ ಆಡಳಿತ ಮಂಡಳಿಯೇ ಭರಿಸಬೇಕು. ಸಂತ್ರಸ್ತ ಕುಟುಂಬದ ಒಬ್ಬ ಮಗಳು ಮತ್ತು ಒಬ್ಬ ಮಗ ಓದುತ್ತಿದ್ದು, ಅವರಿಗೆ ಆರ್ಥಿಕ ಸಹಾಯ ಮಾಡಬೇಕು. ಭದ್ರತೆಯನ್ನು ಗಮನದಲ್ಲಿಟ್ಟುಕೊಂಡು ಶಸ್ತ್ರಾಸ್ತ್ರ ಪರವಾನಗಿಗಳನ್ನು ನೀಡಬೇಕು. 50 ಲಕ್ಷ ರೂಪಾಯಿ ಆರ್ಥಿಕ ನೆರವು ನೀಡಬೇಕು. ಕುಟುಂಬದ ಸದಸ್ಯರಿಗೆ ಸರ್ಕಾರಿ ಇಲಾಖೆಯಲ್ಲಿ ಉದ್ಯೋಗ ನೀಡಬೇಕು. ಕಳೆದ ಮಾರ್ಚ್ ನಲ್ಲಿ ಸಿರ್ಸಾ ಎಸ್ಪಿಗೆ ನೀಡಿದ ದೂರಿನ ಕುರಿತು ತನಿಖೆ ನಡೆಸಿ ಸಂತ್ರಸ್ತ ಕುಟುಂಬಕ್ಕೆ ನ್ಯಾಯ ಒದಗಿಸಬೇಕು. ಆಜಾದ್ ನಗರ ಪೊಲೀಸ್ ಠಾಣೆಯಲ್ಲಿ 2020-2021ರ ಕಳೆದ ಮೂರು ಪ್ರಕರಣಗಳಲ್ಲಿ ಮೂರು ಪ್ರಕರಣಗಳ ತನಿಖೆ ನಡೆಸಿ ಆರೋಪಿಗಳನ್ನು ಕೂಡಲೇ ಬಂಧಿಸಬೇಕು ಎಂದು ಮನವಿ ಮಾಡಿದ್ದಾರೆ.

ಈ ವಿಷಯದ ಬಗ್ಗೆ ಡಿಎಸ್ಪಿ ಜೋಗಿಂದರ್ ಶರ್ಮಾ ಅವರು ಈ ವಿಷಯ ತಮ್ಮ ಅರಿವಿಗೆ ಬಂದಿಲ್ಲ. ನನಗೆ ಪವನ್‌ನ ಪರಿಚಯವೂ ಇಲ್ಲ, ಭೇಟಿಯೂ ಇಲ್ಲ ಎಂದಿದ್ದಾರೆ. ನನ್ನ ಮೂರೂವರೆ ವರ್ಷಗಳ ಅವಧಿಯಲ್ಲಿ ಸಾಕಷ್ಟು ತನಿಖೆ ನಡೆಸಿದ್ದು, ಅಂತಹ ಯಾವುದೇ ಪ್ರಕರಣ ನನ್ನ ಗಮನಕ್ಕೆ ಬಂದಿಲ್ಲ ಎಂದಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!