April 13, 2026
Monday, April 13, 2026
spot_img

ಖಂಡ್ರೆ ವಿರುದ್ಧ ಅವಾಚ್ಯ ಪದ ಬಳಕೆ: ಮಾಜಿ ಕೇಂದ್ರ ಸಚಿವ ಖೂಬಾ ವಿರುದ್ಧ FIR ದಾಖಲು

ಹೊಸದಿಗಂತ ಬೀದರ್:

ಗಡಿನಾಡು ಬೀದರ್ ಜಿಲ್ಲೆಯಲ್ಲಿ ರಾಜಕೀಯ ಕಿಚ್ಚು ಹೆಚ್ಚಾಗಿದ್ದು, ಮಾಜಿ ಕೇಂದ್ರ ಸಚಿವ ಭಗವಂತ ಖೂಬಾ ಹಾಗೂ ಅರಣ್ಯ ಸಚಿವ ಈಶ್ವರ ಖಂಡ್ರೆ ಅವರ ನಡುವಿನ ಮಾತಿನ ಚಕಮಕಿ ಈಗ ಕಾನೂನು ಸಮರಕ್ಕೆ ದಾರಿ ಮಾಡಿಕೊಟ್ಟಿದೆ. ಸಚಿವ ಖಂಡ್ರೆ ಅವರ ವಿರುದ್ಧ ಅವಹೇಳನಕಾರಿ ಶಬ್ದಗಳನ್ನು ಬಳಸಿದ ಆರೋಪದ ಮೇಲೆ ಭಾಲ್ಕಿ ನಗರ ಪೊಲೀಸ್ ಠಾಣೆಯಲ್ಲಿ ಖೂಬಾ ವಿರುದ್ಧ ಎಫ್‌ಐಆರ್ (FIR) ದಾಖಲಾಗಿದೆ.

ಫೆಬ್ರವರಿ 7ರಂದು ಐತಿಹಾಸಿಕ ಪಾಪನಾಶ ದೇವಸ್ಥಾನದ ಅಭಿವೃದ್ಧಿ ಕಾಮಗಾರಿಗೆ ಚಾಲನೆ ನೀಡುವ ವಿಚಾರದಲ್ಲಿ ಈ ಸಂಘರ್ಷ ಆರಂಭವಾಗಿತ್ತು. ಮಾರ್ಚ್ 2024ರಲ್ಲಿಯೇ ಪ್ರಧಾನಿ ಮೋದಿ ಅವರು ಈ ಯೋಜನೆಯನ್ನು ವರ್ಚುವಲ್ ಆಗಿ ಉದ್ಘಾಟಿಸಿದ್ದರು. ಆದರೆ, ಸಚಿವ ಈಶ್ವರ ಖಂಡ್ರೆ ಅವರು ಅದೇ ಕಾಮಗಾರಿಗೆ ಪುನಃ ಚಾಲನೆ ನೀಡುತ್ತಿರುವುದನ್ನು ವಿರೋಧಿಸಿ ಭಗವಂತ ಖೂಬಾ ನೇತೃತ್ವದಲ್ಲಿ ಬಿಜೆಪಿ ಪ್ರತಿಭಟನೆ ನಡೆಸಿತ್ತು. ಈ ವೇಳೆ ಪೊಲೀಸರು ಬಿಜೆಪಿ ನಾಯಕರನ್ನು ವಶಕ್ಕೆ ಪಡೆದಿದ್ದರು.

ಪೊಲೀಸ್ ವಶದಲ್ಲಿದ್ದಾಗ ಭಗವಂತ ಖೂಬಾ ಅವರು ನಡೆಸಿದ ಫೇಸ್‌ಬುಕ್ ಲೈವ್‌ನಲ್ಲಿ ಸಚಿವ ಈಶ್ವರ ಖಂಡ್ರೆ ಅವರ ವಿರುದ್ಧ ಏಕವಚನದಲ್ಲಿ ವಾಗ್ದಾಳಿ ನಡೆಸಿದ್ದಾರೆ ಎಂದು ಆರೋಪಿಸಲಾಗಿದೆ. “ನೀನು ಹಿಜಡಾ ಇದ್ದೀಯಾ”, “ನೀನು ಸತ್ತರೆ ನಿನಗೆ ಮೋಕ್ಷ ಸಿಗುವುದಿಲ್ಲ” ಎಂಬಂತಹ ಕಟುವಾದ ಮತ್ತು ಅವಾಚ್ಯ ಶಬ್ದಗಳನ್ನು ಬಳಸಿದ್ದಾರೆ ಎನ್ನಲಾಗಿದ್ದು, ಇದು ಕಾಂಗ್ರೆಸ್ ಕಾರ್ಯಕರ್ತರ ಆಕ್ರೋಶಕ್ಕೆ ಕಾರಣವಾಗಿದೆ.

ಕಾಂಗ್ರೆಸ್ ಕಾರ್ಯಕರ್ತ ಸುರೇಶ್ ಬಿರಾದಾರ ನೀಡಿದ ದೂರಿನ ಮೇರೆಗೆ, ಭಾಲ್ಕಿಯ ಸಿವಿಲ್ ಹಾಗೂ ಜೆಎಂಎಫ್‌ಸಿ ನ್ಯಾಯಾಲಯದ ಅನುಮತಿ ಪಡೆದು ಪೊಲೀಸರು ಈಗ ಎಫ್‌ಐಆರ್ ದಾಖಲಿಸಿದ್ದಾರೆ. ಘಟನೆ ನಡೆದು 9 ದಿನಗಳ ನಂತರ ಈ ಪ್ರಕರಣ ದಾಖಲಾಗಿರುವುದು ಜಿಲ್ಲೆಯಲ್ಲಿ ಚರ್ಚೆಗೆ ಗ್ರಾಸವಾಗಿದ್ದು, ಇದು ಕಾಂಗ್ರೆಸ್‌ನ “ದ್ವೇಷದ ರಾಜಕಾರಣ” ಎಂದು ಬಿಜೆಪಿ ಟೀಕಿಸಿದೆ.

ಜಿಲ್ಲೆಯ ರಾಜಕೀಯ ಇತಿಹಾಸದಲ್ಲೇ ವೈಯಕ್ತಿಕ ಟೀಕೆಗಳಿಗಾಗಿ ಈ ಮಟ್ಟದ ಕಾನೂನು ಹೋರಾಟ ನಡೆಯುತ್ತಿರುವುದು ಸಾರ್ವಜನಿಕ ವಲಯದಲ್ಲಿ ತೀವ್ರ ಕುತೂಹಲ ಮೂಡಿಸಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !