ಹೊಸದಿಗಂತ ಡಿಜಿಟಲ್ ಡೆಸ್ಕ್:
ನಗರದ ಕೆ.ಆರ್. ಪುರಂ ವ್ಯಾಪ್ತಿಯ ಟಿ.ಸಿ. ಪಾಳ್ಯ ಸಿಗ್ನಲ್ ಬಳಿ ಇರುವ ಎಲೆಕ್ಟ್ರಿಕ್ ಬೈಕ್ ಶೋರೂಮ್‌ವೊಂದರಲ್ಲಿ ರಾತ್ರಿ ಭೀಕರ ಬೆಂಕಿ ಕಾಣಿಸಿಕೊಂಡಿದೆ. ರಾತ್ರಿ ಸುಮಾರು 10:30ರ ವೇಳೆಗೆ ಸಂಭವಿಸಿದ ಈ ಅವಘಡದಲ್ಲಿ ಶೋರೂಮ್‌ನಲ್ಲಿದ್ದ ಸುಮಾರು 13 ಎಲೆಕ್ಟ್ರಿಕ್ ಬೈಕ್‌ಗಳು ಸಂಪೂರ್ಣವಾಗಿ ಬೆಂಕಿಗೆ ಆಹುತಿಯಾಗಿವೆ.
ರಾತ್ರಿ ವೇಳೆ ಶೋರೂಮ್‌ನಿಂದ ಏಕಾಏಕಿ ದಟ್ಟವಾದ ಹೊಗೆ ಮತ್ತು ಬೆಂಕಿ ಕಾಣಿಸಿಕೊಂಡಿದ್ದರಿಂದ ಸ್ಥಳೀಯರು ಆತಂಕಕ್ಕೊಳಗಾಗಿದ್ದರು. ವಿಷಯ ತಿಳಿಯುತ್ತಿದ್ದಂತೆಯೇ ಸ್ಥಳಕ್ಕೆ ಧಾವಿಸಿದ ಅಗ್ನಿಶಾಮಕ ದಳದ ಸಿಬ್ಬಂದಿ ಸತತ ಕಾರ್ಯಾಚರಣೆ ನಡೆಸಿ ಬೆಂಕಿಯನ್ನು ಹತೋಟಿಗೆ ತಂದಿದ್ದಾರೆ. ಇದರಿಂದಾಗಿ ಅಕ್ಕಪಕ್ಕದ ಕಟ್ಟಡಗಳಿಗೆ ಬೆಂಕಿ ಹರಡುವುದು ತಪ್ಪಿದೆ.
ಬೆಂಕಿ ಕಾಣಿಸಿಕೊಂಡ ಸಮಯದಲ್ಲಿ ಶೋರೂಮ್‌ನಲ್ಲಿ ಯಾರೂ ಇಲ್ಲದ ಕಾರಣ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. ಆದರೆ ಲಕ್ಷಾಂತರ ರೂಪಾಯಿ ಮೌಲ್ಯದ ಆಸ್ತಿ ಪಾಸ್ತಿ ನಷ್ಟವಾಗಿದೆ ಎಂದು ಅಂದಾಜಿಸಲಾಗಿದೆ.
ಸದ್ಯ ಕೆ.ಆರ್. ಪುರಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಬೆಂಕಿ ಅವಘಡಕ್ಕೆ ನಿಖರ ಕಾರಣವೇನು? ಬ್ಯಾಟರಿ ಸ್ಫೋಟಗೊಂಡಿದೆಯೇ ಅಥವಾ ಶಾರ್ಟ್ ಸರ್ಕ್ಯೂಟ್ ಕಾರಣವೇ? ಎಂಬ ಬಗ್ಗೆ ಪೊಲೀಸರು ತನಿಖೆ ಕೈಗೊಂಡಿದ್ದಾರೆ.


