ಅಡುಗೆ ಅನಿಲ ಸೋರಿಕೆಯಿಂದ ಅಗ್ನಿ ಅವಘಡ: ಗೃಹಬಳಕೆ ವಸ್ತುಗಳು ಬೆಂಕಿಗಾಹುತಿ

ಹೊಸದಿಗಂತ ವರದಿ,ಚಿತ್ರದುರ್ಗ :

ಹಬ್ಬದ ಅಡುಗೆ ಮಾಡುವ ಸಂದರ್ಭದಲ್ಲಿ ಅಡುಗೆ ಅನಿಲ ಸೋರಿಕೆಯಾಗಿ ಉಂಟಾದ ಅಗ್ನಿ ಅವಘಡದಲ್ಲಿ ಮನೆಯಲ್ಲಿ ಬೆಂಕಿ ಹೊತ್ತಿ ಉರಿದ ಪರಿಣಾಮ ಮನೆ ಹಾಗೂ ಮನೆಯಲ್ಲಿದ್ದ ಗೃಹಬಳಕೆ ವಸ್ತುಗಳಿಗೆ ಹಾನಿಯಾಗಿರುವ ಘಟನೆ ಚಿತ್ರದುರ್ಗ ತಾಲೂಕಿನ ಮೆದೇಹಳ್ಳಿಯ ತಮಟಕಲ್ ರಸ್ತೆಯಲ್ಲಿರುವ ಜಯಂತಿ ನಗರದಲ್ಲಿ ನಡೆದಿದೆ.

ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಚಿತ್ರದುರ್ಗ – ದಾವಣಗೆರೆ ವಿಭಾಗ ಸಂಚಾಲಕ ಗೋಪಿ ಮನೆಗೆ ಹಬ್ಬಕ್ಕೆಂದು ಐದಾರು ಜನ ಸಂಬಂಧಿಕರು ಮನೆಗೆ ಬಂದಿದ್ದರು. ಯುಗಾದಿ ಹಬ್ಬದ ಪ್ರಯುಕ್ತ ಅಡುಗೆ ತಯಾರಿ ನಡೆದಿತ್ತು. ಗೋಪಿ ಅವರ ತಾಯಿ ಸುಜಾತ ಅಡುಗೆ ಕೆಲಸದಲ್ಲಿ ನಿರತರಾಗಿದ್ದರು. ಸಿಲಿಂಡರ್‌ನಲ್ಲಿ ಅಡುಗೆ ಅನಿಲ ಸೋರಿಕೆಯಾಗುತ್ತಿದ್ದು, ಇರು ಮನೆಯವರ ಗಮನಕ್ಕೆ ಬಂದಿಲ್ಲ. ಇದ್ದಕ್ಕಿದ್ದಂತೆ ಸಿಲಿಂಡರ್ ಹೊತ್ತಿ ಉರಿದಿದೆ. ಇದರಿಂದ ಮನೆ ಹಾಗೂ ಮನೆಯಲ್ಲಿದ್ದ ಗೃಹ ಬಳಕೆ ವಸ್ತುಗಳು ಸಂಪೂರ್ಣ ಸುಟ್ಟು ಕರಕಲಾಗಿವೆ.

ಅಗ್ನಿ ಅವಘಡ ಸಂಭವಿಸಿದ ಕೂಡಲೇ ಮನೆಯಲ್ಲಿದ್ದ ಸಂಬಂಧಿಕರು ಮನೆಯಿಂದ ಹೊರಗೆ ಓಡಿ ಬಂದಿದ್ದಾರೆ. ಇದ್ದಕ್ಕಿದ್ದಂತೆ ಬೆಂಕಿ ಹೊತ್ತಿಕೊಂಡ ಪರಿಣಾಮ ದಿಕ್ಕು ತೋಚದಂತಾದ ಸುಜಾತ ಮಂಕು ಕವಿದವರಂತಯೆ ಅಡುಗೆ ಮನೆಯಲ್ಲೇ ನಿಂತುಬಿಟ್ಟಿದ್ದಾರೆ. ಇದನ್ನು ಗಮನಿಸಿದ ನೆರೆಹೊರೆಯವರು ಸಮಯಪ್ರಜ್ಞೆ ಮೆರೆದಿದ್ದಾರೆ. ಕೂಡಲೇ ಒಳಹೋಗಿ ಅಡುಗೆ ಮನೆಯಲ್ಲಿದ್ದ ಸುಜಾತ ಅವರನ್ನು ಮನೆಯಿಂದ ಹೊರಗೆ ಕರೆತಂದಿದ್ದಾರೆ.

ಎಬಿವಿಪಿ ವತಿಯಿಂದ ಉಚಿತ ಸಿಇಟಿ ತರಗತಿಗಳನ್ನು ನಡೆಸಲಾಗುತ್ತಿದ್ದು, ಘಟನೆಯ ಸಂದರ್ಭದಲ್ಲಿ ಎಬವಿಪಿ ಗೋಪಿ ಸಿಇಟಿ ತರಗತಿಗಳು ನಡೆಯುತ್ತಿದ್ದ ಸ್ಥಳದಲ್ಲಿದ್ದರು. ತಂದೆ ರಂಗಸ್ವಾಮಿ ಸಹ ಕೆಲಸ ನಿಮಿತ್ತ ಹೊರಗೆ ಹೋಗಿದ್ದರು. ವಿಷಯ ತಿಳಿದ ಗೋಪಿ ಅಗ್ನಿಶಾಮಕ ಠಾಣೆಗೆ ಫೋನ್ ಮಾಡಿ ಸ್ಥಳಕ್ಕೆ ಧಾವಿಸಿದರು. ಅಗ್ನಿಶಾಮಕ ದಳದವರು ಬೆಂಕಿ ನಂದಿಸುವಲ್ಲಿ ಶ್ರಮಿಸಿದ್ದಾರೆ.

ಘಟನೆಯಲ್ಲಿ ಮನೆಯ ಗೋಡೆ, ಮೇಲ್ಚಾವಣೆ ಸೇರಿದಂತೆ ಬಹುತೇಕ ಭಾಗಕ್ಕೆ ಹಾನಿಯಾಗಿದೆ. ಗೃಹ ಬಳಕೆ ವಸ್ತುಗಳಾದ ಪಾತ್ರೆ ಪಗಡೆ, ಬಟ್ಟೆ ಬರೆ, ಆಹಾರ ಧಾನ್ಯ ಸೇರಿದಂತೆ ಆಹಾರ ಪದಾರ್ಥಗಳು, ಮನೆಯಲ್ಲಿಟ್ಟಿದ್ದ ಹಣ ಬೆಂಕಿಗೆ ಆಹುತಿಯಾಗಿದೆ. ಅವಘಡದಿಂದ ಸುಮಾರು ೪ ರಿಂದ ೫ ಲಕ್ಷ ನಷ್ಟ ಸಂಭವಿಸಿದೆ ಎಂದು ಅಂದಾಜಿಸಲಾಗಿದೆ. ಅದೃಷ್ಟವಶಾತ್ ಘಟನೆಯಲ್ಲಿ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!