ಹೊಸದಿಗಂತ ಡಿಜಿಟಲ್ ಡೆಸ್ಕ್:
ಇಂಡೋನೇಷ್ಯಾದ ಭೀಕರ ಹಡಗು ದುರಂತ ಸಂಭವಿಸಿದ್ದು, 280 ಮಂದಿ ಪ್ರಯಾಣಿಸುತ್ತಿದ್ದ ಹಡಗಿನಲ್ಲಿ ಅಗ್ನಿ ಅವಘಡ ಸಂಭವಿಸಿ ಕನಿಷ್ಠ 3 ಮಂದಿ ಸಾವನ್ನಪ್ಪಿದ್ದಾರೆ.
KM ಬಾರ್ಸಿಲೋನಾ VA ಹಡಗಿನಲ್ಲಿ ಭಾನುವಾರ ಅಗ್ನಿ ದುರಂತ ಸಂಭವಿಸಿದೆ. ಇಂದು ಮಧ್ಯಾಹ್ನ ಉತ್ತರ ಸುಲವೇಸಿ ಪ್ರಾಂತ್ಯದ ತಾಲಿಸ್ ದ್ವೀಪದ ಬಳಿ ಸಂಭವಿಸಿದ ಭಾರಿ ಬೆಂಕಿ ಅವಘಡದಲ್ಲಿ ಕನಿಷ್ಠ ಮೂವರು ಸಾವನ್ನಪ್ಪಿದ್ದಾರೆ.
ಪ್ರಯಾಣಿಕರು ಆತಂಕಗೊಂಡು ಲೈಫ್ ಜಾಕೆಟ್‌ಗಳನ್ನು ಧರಿಸಿ, ಸಹಾಯಕ್ಕಾಗಿ ಕೂಗುತ್ತಾ, ದಟ್ಟವಾದ ಕಪ್ಪು ಹೊಗೆ ಮತ್ತು ಜ್ವಾಲೆಗಳ ನಡುವೆಯೇ ನೀರಿಗೆ ಹಾರುತ್ತಿರುವುದು ವಿಡಿಯೋದಲ್ಲಿ ದಾಖಲಾಗಿದೆ.
ಈ ಹಡಗಿನಲ್ಲಿ ಸುಮಾರು 280 ರಿಂದ 300 ಮಂದಿ ಪ್ರಯಾಣಿಕರು ಪ್ರಯಾಣಿಸುತ್ತಿದ್ದರು. ಬೆಂಕಿ ಕಾಣಿಸಿಕೊಂಡಾಗ ಹಡಗು ತಲೌಡ್ ದ್ವೀಪದಿಂದ ಮನಾಡೊ ನಗರಕ್ಕೆ ಪ್ರಯಾಣಿಸುತ್ತಿದ್ದರು ಎಂದು ತಿಳಿದುಬಂದಿದೆ.
ಇಂಡೋನೇಷ್ಯಾದ ರಾಷ್ಟ್ರೀಯ ಶೋಧ ಮತ್ತು ರಕ್ಷಣಾ ಸಂಸ್ಥೆ, ನೌಕಾಪಡೆ, ಕರಾವಳಿ ಕಾವಲು ಪಡೆ ಘಟನಾ ಸ್ಥಳಕ್ಕೆ ದೌಡಾಯಿಸಿದ್ದು, ಸ್ಥಳೀಯ ಮೀನುಗಾರರ ಜೊತೆಗೆ, ಹಡಗಿನಲ್ಲಿರುವವರನ್ನು ಸ್ಥಳಾಂತರಿಸಲು ರಕ್ಷಣಾ ಕಾರ್ಯಾಚರಣೆ ನಡೆಸಿದ್ದಾರೆ.