ಹೊಸದಿಗಂತ ವರದಿ,ಶಿರಸಿ:
ವಾಹನಗಳ ಬಿಡಿಭಾಗಗಳನ್ನು ಉತ್ಪಾದನೆ ಮಾಡುತ್ತಿದ್ದ ಫೈಬರ್ ಫ್ಯಾಕ್ಟರಿಗೆ ಆಕಸ್ಮಿಕವಾಗಿ ಬೆಂಕಿ ಬಿದ್ದು, ಫ್ಯಾಕ್ಟರಿಯೊಳಗಿನ ವಸ್ತುಗಳು ಸಂಪೂರ್ಣ ಸುಟ್ಟು ಲಕ್ಷಾಂತರ ರೂ ಹಾನಿಯಾದ ಘಟನೆ ತಾಲೂಕಿನ ಕೊಳಗಿಬೀಸ್‌ನಲ್ಲಿ ಸಂಭವಿಸಿದೆ.
ಶಿರಸಿ-ಕುಮಟಾ ರಾಷ್ಟ್ರೀಯ ಹೆದ್ದಾರಿ ಪಕ್ಕದಲ್ಲೇ ಇರುವ ಮಾನ್ಯ ಪಾಲಿಟೆಕ್ ಕಾರ್ಖಾನೆಗೆ ಬೆಂಕಿ ತಗುಲಿದ್ದು, ಮಶೀಗದ್ದೆಯ ರಾಘವ ವಿಘ್ನೇಶ್ವರ ಹೆಗಡೆ ಅವರಿಗೆ ಸೇರಿದ ಕಾರ್ಖಾನೆಯಾಗಿದೆ. ಬೆಂಕಿ ನಂದಿಸಲು ಅಗ್ನಿಶಾಮಕ ತಂಡ ಹರಸಾಹಸಪಡುತ್ತಿದೆ. ಬೆಂಕಿಯ ರಭಸಕ್ಕೆ ಕಾರ್ಖಾನೆಯ ಬಹುತೇಕ ವಸ್ತುಗಳು ಸುಟ್ಟು ಕರಕಲಾಗಿದೆ.
ಶಾರ್ಟ್ ಸರ್ಕ್ಯೂಟ್ ನಿಂದ ಬೆಂಕಿ ತಗುಲಿರಬಹುದು ಎಂದು ಅಂದಾಜಿಸಲಾಗಿದೆ. ಕಾರ್ಖಾನೆಯೊಳಗಿದ್ದ 22 ಕಾರ್ಮಿಕರು ಸುರಕ್ಷಿತವಾಗಿದ್ದಾರೆ. ಕಾರ್ಖಾನೆ ಸಂಪೂರ್ಣ ಸುಟ್ಟು ಪಕ್ಕದ ತೋಟಕ್ಕೆಹರಡಿ ಹಾನಿ ಸಂಭವಿಸಿದೆ. ಅಗ್ನಿ ಶಾಮಕ ದಳದ ಸಿಬ್ಬಂದಿ ಬೆಂಕಿ ನಂದಿಸಲು ಹರಸಾಹಸ ಪಡುತ್ತಿದ್ದು, ಸುಮಾರು 2 ಗಂಟೆಗಳಿಂದ ಕಾರ್ಯಾಚರಣೆ ಬಳಿಕ ಬೆಂಕಿ ಹತೋಟಿಗೆ ಬಂದಿದೆ. ಫ್ಯಾಕ್ಟರಿಗೆ ಬೆಂಕಿ ತಗುಲಿದ ಹಿನ್ನೆಲೆಯಲ್ಲಿ ಅಕ್ಕ ಪಕ್ಕದ ಮನೆಯವರು ಗಾಬರಿಗೊಂದು ಗ್ಯಾಸ್ ಸಿಲಿಂಡರ್‌ಗಳನ್ನು ಬಂದ್ ಮಾಡಿ ಮನೆಯಿಂದ ಹೊರಗೆ ಬಂದಿದ್ದಾರೆ. ಈ ಕುರಿತು ಶಿರಸಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.