ಚಿಪ್ಸ್‌ ತಯಾರಿಕಾ ಫ್ಯಾಕ್ಟರಿಗೆ ಬೆಂಕಿ-ಲಕ್ಷಾಂತರ ರೂ. ನಷ್ಟ!

ಹೊಸದಿಗಂತ ವರದಿ, ಮಂಡ್ಯ:

ಚಿಪ್ಸ್‌ ತಯಾರಿಕಾ ಕಾರ್ಖಾನೆಯಲ್ಲಿ ಬೆಂಕಿ ಅವಘಡ ಸಂಭವಿಸಿದ್ದು, ಅಪಾರ ಪ್ರಮಾಣದ ನಷ್ಟ ಉಂಟಾಗಿರುವ ಘಟನೆ ನಗರದ ಸಾಹುಕಾರ್ ಚನ್ನಯ್ಯ ಬಡಾವಣೆಯಲ್ಲಿ ನಡೆದಿದೆ.

ಬಡಾವಣೆಯ 9ನೇ ಕ್ರಾಸ್ ನಲ್ಲಿರುವ ಚಿಪ್ಸ್ ಕಾರ್ಖಾನೆಗೆ ವಿದ್ಯುತ್ ಶಾರ್ಟ್ ಸರ್ಕ್ಯೂಟ್ ನಿಂದ ಬೆಂಕಿ ತಗುಲಿ ಈ ಅನಾಹುತ ಸಂಭವಿಸಿದ್ದು, ಫ್ಯಾಕ್ಟರಿಯ ಗೋದಾಮಿನಲ್ಲಿದ್ದ ತಯಾರಿಕಾ ಸಾಮಗ್ರಿಗಳು ಸುಟ್ಟು ಭಸ್ಮ ವಾಗಿವೆ.‌

ಆಹಾರ ಪದಾರ್ಥ ತಯಾರಿಕೆಗಾಗಿ ಗೋದಾಮು ನಿರ್ಮಾಣ ಮಾಡಿಕೊಂಡಿದ್ದ ಮಾಲೀಕ ಉಮೇಶ್ ಚಿಪ್ಸ್ ತಯಾರು ಮಾಡುತ್ತಿದ್ದರು. ಇದಕ್ಕಾಗಿ ಲಕ್ಷಾಂತರ ರೂ ಬೆಲೆಬಾಳುವ ಯಂತ್ರೋಪಕರಣಗಳನ್ನು ಅಳವಡಿಸಿದ್ದರು. ಚಿಪ್ಸ್ ತಯಾರಿಸಿ ಮಾರಾಟಕ್ಕಾಗಿ ಬೇರೆಡೆಗೆ ಸಾಗಾಣಿಕೆ ಮಾಡುತ್ತಿದರು.

ಶನಿವಾರ ಮಧ್ಯರಾತ್ರಿ ವೇಳೆ ಫ್ಯಾಕ್ಟರಿಯಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ಕ್ಷಣಾರ್ಧದಲ್ಲಿ ಬೆಂಕಿಯ ಜ್ವಾಲೆ ಎಲ್ಲೆಡೆ ಆವರಿಸಿದ್ದರಿಂದ ಯಂತ್ರೋಪಕರಣಗಳು ಸುಟ್ಟು ಕರಕಲಾಗಿವೆ. ಸ್ಥಳೀಯರು ಬೆಂಕಿ ಹೊತ್ತಿ ಕೊಂಡಿರುವುದನ್ನು ಕಂಡು ಅಗ್ನಿಶಾಮಕ ದಳಕ್ಕೆ ಮಾಹಿತಿ ನೀಡಿದ್ದು, ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಕ ದಳದ ಸಿಬ್ಬಂದಿ ಸುಮಾರು 4 ವಾಹನಗಳಲ್ಲಿ ಸತತ ಮೂರು ಗಂಟೆಗಳ ಕಾರ್ಯಾಚರಣೆ ನಡೆಸಿ ಬೆಂಕಿ ನಂದಿಸಿದ್ದಾರೆ. ಅಷ್ಟರಲ್ಲಿ ಕಾರ್ಖಾನೆಯಲ್ಲಿದ್ದ ಬಹುತೇಕ ವಸ್ತುಗಳು ಬೆಂಕಿಗೆ ಆಹುತಿಯಾಗಿದ್ದು, ಅಂದಾಜು 15 ಲಕ್ಷ ರೂ ಹೆಚ್ಚು ವೌಲ್ಯದ ವಸ್ತುಗಳು ಸುಟ್ಟುಹೋಗಿವೆ ಎಂದು ಹೇಳಲಾಗಿದೆ.

ಸ್ಥಳಕ್ಕೆ ಭೇಟಿ ನೀಡಿದ ವಿಧಾನಸಭಾ ಕ್ಷೇತ್ರದ ಶಾಸಕ ಪಿ ರವಿಕುಮಾರ್ ಗಣಿಗ ಅವರು ಮಾಲೀಕ ಉಮೇಶ್ ಅವರಿಗೆ ಸಾಂತ್ವನ ಹೇಳಿದರಲ್ಲದೆ, ಸರ್ಕಾರದ ವತಿಯಿಂದ ದೊರೆಯಬಹುದಾದ ಸೂಕ್ತ ಪರಿಹಾರವನ್ನು ದೊರಕಿಸಿಕೊಡುವ ಭರವಸೆ ನೀಡಿದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!