ಹೊಸದಿಗಂತ ವರದಿ ಬೀದರ್:
ನಗರದ ಹಳೆ ತರಕಾರಿ ಮಾರುಕಟ್ಟೆಯಲ್ಲಿರುವ ಗಾದಿ ಮಾಡುವ ಹತ್ತಿ ಗೋದಾಮಿಗೆ ಗುರುವಾರ ರಾತ್ರಿ 9.30ರ ಸುಮಾರಿಗೆ ಬೆಂಕಿ ತಗುಲಿ ಸುಮಾರು 30 ಲಕ್ಷಕ್ಕೂ ಹೆಚ್ಚಿನ ಹಾನಿಯಾಗಿದೆ.
ಮಾರುಕಟ್ಟೆಯಲ್ಲಿ ಎಂ ಡಿ. ಇಸ್ಮಾಯಿಲ್ ಎಂಬುವವರಿಗೆ ಸೇರಿದ ಗಾದಿ ಅಂಗಡಿ ಇದ್ದು ಲಗ್ನ ಸೀಜನ್ ಇದ್ದ ಕಾರಣ ಅಂಗಡಿಯ ಎದುರಿಗೆ ಇರುವ ಗೋದಾಮಿನಲ್ಲಿ ಹತ್ತಿ ತಂದಿಟ್ಟಿದ್ದರು. ಎಂದಿನಂತೆ ಕೆಲಸ ಮಾಡಿ ಎಲ್ಲವು ಬಂದ್ ಮಾಡಿ ಮನೆಗೆ ಹೋಗಿದ್ದ ಅರ್ಧ ಗಂಟೆಯಲ್ಲಿಯೆ ಗೋದಾಮಿಗೆ ಬೆಂಕಿ ಹತ್ತಿ ಧಗಧಗನೆ ಉರಿಯಲು ಆರಂಭಿಸಿತ್ತು.
ಕೂಡಲೇ ಅಗ್ನಿ ಶಾಮಕ ಠಾಣೆಗೆ ಮಾಹಿತಿ ನೀಡಿದ್ದರು ಸಮಯಕ್ಕೆ ಅಗ್ನಿ ಶಾಮಕ ವಾಹನ ಬಂದಿಲ್ಲ ಸುತ್ತಲಿನ ಅಂಗಡಿ ಮಾಲಿಕರು, ಮನೆಯರು ಅಕ್ಕ-ಪಕ್ಕದ ಬಾವಿಯ ನೀರಿನ ಪೈಪ್ ನಿಂದ ಬೆಂಕಿ ಆರಿಸಲು ಪ್ರಯತ್ನಿಸಿದ್ದರೂ ಕೂಡ ಆರಿಲ್ಲ. ಮೊದಲಿಗೆ ಅಗ್ನಿ ಶಾಮಕ ಸಿಬ್ಬಂದಿಗಳು ವಾಹನ ಇಲ್ಲದಕ್ಕೆ ಬೆಂಕಿ ಆರಿಸುವ ಗ್ಯಾಸ್ ಸಿಲೆಂಡರ್ ತೆಗೆದುಕೊಂಡು ಬಂದರು ಬೆಂಕಿ ಹತೋಟಿಗೆ ಬಂದಿಲ್ಲ.
ನಂತರ ರಾತ್ರಿ ಸುಮಾರು 11ರ ಸಮಯಕ್ಕೆ ಅಗ್ನಿ ಶಾಮಕ ವಾಹನವು ಬಂದು ಬೆಂಕಿ ಆರಿಸಲು ಸುಮಾರು 1 ಗಂಟೆಯ ಕಾಲ ಹಿಡಿಯಿತು. ಈ ಘಟನೆಯಲ್ಲಿ ಗಾದಿ ಮಾಡಲು ತಂದಿಟ್ಟ ಹತ್ತಿ, ಲಗ್ನದ ಆರ್ಡರನಲ್ಲಿ ತಯಾರು ಮಾಡಿಟ್ಟ ಗಾದಿಗಳು, ಹತ್ತಿ ಕ್ಲಿನ್ ಮಾಡುವ 2 ಯಂತ್ರ, 1 ಬೈಕ್ ಸೇರಿದಂತೆ ಇನ್ನಿತರ ವಸ್ತುಗಳು ಸುಟ್ಟು ಕರಕಲಾಗಿವೆ. ಹೀಗೆ ಒಟ್ಟು 30 ಲಕ್ಷದ ಹಾನಿ ಎಂದು ಅಂದಾಜಿಸಲಾಗಿದೆ.