March 23, 2026
Monday, March 23, 2026
spot_img

ಚಲಿಸುತ್ತಿದ್ದ ಓಮ್ನಿಯಲ್ಲಿ ಬೆಂಕಿ, ಹಿಂಬದಿ ವಾಹನ ಸವಾರನಿಂದ ಉಳಿಯಿತು ಪ್ರಾಣ

ಹೊಸದಿಗಂತ ವರದಿ ಉಳ್ಳಾಲ:

ಚಲಿಸುತ್ತಿದ್ದ ಓಮ್ನಿ ಕಾರಲ್ಲಿ ದಿಢೀರನೆ ಬೆಂಕಿ ಕಾಣಿಸಿಕೊಂಡಿದ್ದು, ಹಿಂಬದಿ ವಾಹನ ಸವಾರನು ಅಪಾಯದ ಮುನ್ಸೂಚನೆ ನೀಡಿದ ಪರಿಣಾಮ ಓಮ್ನಿ ಚಾಲಕನು ಪ್ರಾಣಾಪಾಯದಿಂದ ಪಾರಾದ ಘಟನೆ ರಾ.ಹೆ.66 ರ ಕೋಟೆಕಾರು ಅಡ್ಕ ಎಂಬಲ್ಲಿ ಗುರುವಾರ ಮಧ್ಯಾಹ್ನ ನಡೆದಿದೆ.

ಆಗಿದ್ದೇನು?
ತಲಪಾಡಿ ನಿವಾಸಿ ರಿಯಾಝ್ ಎನ್ನುವವರು ಗುರುವಾರ ಮಧ್ಯಾಹ್ನದಂದು ಅಡ್ಕದ ಗ್ಯಾರೇಜ್ ಒಂದರಲ್ಲಿ ದುರಸ್ಥಿಗೊಳಿಸಲಾಗಿದ್ದ ತನ್ನ ಓಮ್ನಿ ಕಾರನ್ನ ವಾಪಸು ಪಡೆದು ಪೆಟ್ರೋಲ್ ತುಂಬಿಸಿ ತಲಪಾಡಿಯತ್ತ ಪ್ರಯಾಣಿಸುತ್ತಿದ್ದರು. ಈ ವೇಳೆ ಕಾರಲ್ಲಿ ಹೊಗೆ ಕಾಣಿಸಿಕೊಂಡಿದೆ. ಕಾರಲ್ಲಿ ಬೆಂಕಿ ಹತ್ತಿದ ವಿಚಾರ ರಿಯಾಝ್ ಅವರ ಗಮನಕ್ಕೆ ಬಂದಿಲ್ಲ. ಈ ವೇಳೆ ಹಿಂಬದಿ ವಾಹನ ಸವಾರರೋರ್ವರು ರಿಯಾಝ್ ಅವರಲ್ಲಿ ಕಾರಲ್ಲಿ ಬೆಂಕಿ ಹಚ್ಚಿಕೊಂಡಿರುವ ವಿಚಾರ ತಿಳಿಸಿದ್ದಾರೆ‌.

ತಕ್ಷಣವೇ ರಿಯಾಝ್ ಅವರು ಕಾರನ್ನ ಹೆದ್ದಾರಿ ಬದಿಯಲ್ಲಿ ನಿಲ್ಲಿಸಿ ಹೊರಗೋಡಿದ್ದಾರೆ. ಕ್ಷಣಾರ್ಧದಲ್ಲೇ ಕಾರಿಗೆ ಸಂಪೂರ್ಣ ಬೆಂಕಿ ಹತ್ತಿಕೊಂಡು ಸುಟ್ಟು ಕರಕಲಾಗಿದೆ. ಅಗ್ನಿಶಾಮಕ ದಳದ ಸಿಬ್ಬಂದಿ ತಕ್ಷಣವೇ ಸ್ಥಳಕ್ಕಾಗಮಿಸಿ ಬೆಂಕಿಯನ್ನು ನಂದಿಸಿದ್ದಾರೆ.
ಕಾರಲ್ಲಿ ಟ್ಯಾಂಕ್ ತುಂಬಾ ಪೆಟ್ರೋಲ್ ಇದ್ದ ಪರಿಣಾಮ ಕಾರಿಗೆ ಬೆಂಕಿ ಹತ್ತಿಕೊಂಡಿರುವುದಾಗಿ ಶಂಕಿಸಲಾಗಿದೆ.

ಹಿಂಬದಿ ಸವಾರರ ಸಮಯಪ್ರಜ್ಞೆಯಿಂದ ಓಮ್ನಿ ಚಾಲಕರ ಪ್ರಾಣ ಉಳಿದಿದೆ. ಅವರ ಈ ಕಾರ್ಯಕ್ಕೆ ಜನರಿಂದ ಮೆಚ್ಚುಗೆ ವ್ಯಕ್ತವಾಗಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !