ಹೊಸದಿಗಂತ ಡಿಜಿಟಲ್ ಡೆಸ್ಕ್:
ಪಶ್ಚಿಮ ಗೋದಾವರಿ ಜಿಲ್ಲೆಯಲ್ಲಿ ಶ್ರೀರಾಮ ನವಮಿ ಆಚರಣೆ ವೇಳೆ ದುರ್ಘಟನೆಯೊಂದು ನಡೆದಿದೆ. ವೇಣುಗೋಪಾಲಸ್ವಾಮಿ ದೇವಸ್ಥಾನದ ಆವರಣದಲ್ಲಿ ಭಾರಿ ಬೆಂಕಿ ಹೊತ್ತಿಕೊಂಡಿದೆ. ಪಟಾಕಿ ಸಿಡಿತದಿಂದ ದೇವಾಲಯದ ಮುಂದಿದ್ದ ಶಾಮಿಯಾನ, ಪೆಂಡಾಲ್ ಸುಟ್ಟು ಕರಕಲಾದವು. ಅಕ್ಕಪಕ್ಕದಲ್ಲಿದ್ದ ಗುಡಿಸಲುಗಳಿಗೂ ಬೆಂಕಿ ವ್ಯಾಪಿಸಿದೆ.
ಶ್ರೀರಾಮನವಮಿ ನಿಮಿತ್ತ ದೇವಸ್ಥಾನದ ಆವರಣದಲ್ಲಿ ಭಕ್ತರಿಗಾಗಿ ಶಾಮಿಯಾನ ಹಾಕಲಾಗಿತ್ತು. ಬೆಂಕಿ ತಗುಲಿ ದೇವಸ್ಥಾನದ ಆವರಣದ ಮೇಲ್ಛಾವಣಿ ಸಂಪೂರ್ಣ ಸುಟ್ಟು ಕರಕಲಾಗಿದೆ. ಅಗ್ನಿ ಅವಘಡದ ಭಯದಿಂದ ಭಕ್ತರು ಅಲ್ಲಿಂದ ಓಡಿ ಹೋಗಿದ್ದಾರೆ.
ಮಾಹಿತಿ ಪಡೆದ ತಕ್ಷಣ ಅಗ್ನಿಶಾಮಕ ಸಿಬ್ಬಂದಿ ಸ್ಥಳಕ್ಕೆ ಆಗಮಿಸಿ ಅಗ್ನಿಶಾಮಕ ಯಂತ್ರಗಳ ಮೂಲಕ ಬೆಂಕಿ ನಂದಿಸಿದ್ದಾರೆ. ಅಗ್ನಿಶಾಮಕ ದಳದ ಸಿಬ್ಬಂದಿ ಹರಸಾಹಸ ಮಾಡಿ ಬೆಂಕಿಯನ್ನು ಹತೋಟಿಗೆ ತಂದಿದ್ದಾರೆ. ಆದರೆ, ಯಾವುದೇ ಪ್ರಾಣ ಹಾನಿಯಾಗದ ಕಾರಣ ಎಲ್ಲರೂ ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದಾರೆ. ಆದರೆ, ಆಸ್ತಿಪಾಸ್ತಿಗೆ ಸ್ವಲ್ಪ ಹಾನಿಯಾಗಿದೆ.