ಗೇಮಿಂಗ್‌ ಝೋನ್‌ನಲ್ಲಿ ಅಗ್ನಿ ದುರಂತ: ಅಧಿಕಾರಿಗಳಿಗೆ ಚಾಟಿ ಬೀಸಿದ ಹೈಕೋರ್ಟ್

ಹೊಸದಿಗಂತ ಡಿಜಿಟಲ್ ಡೆಸ್ಕ್:

ಕಳೆದ ತಿಂಗಳು ರಾಜ್‍ಕೋಟ್‍ನ ಗೇಮಿಂಗ್‌ ಝೋನ್‌ನಲ್ಲಿ ಸಂಭವಿಸಿದ ಅಗ್ನಿ ದುರಂತ ಕುರಿತು ಇಂದು (ಜೂ.13) ವಿಚಾರಣೆ ನಡೆಸಿದ ಗುಜರಾತ್ ಹೈಕೋರ್ಟ್ , ಮುನ್ಸಿಪಲ್ ಕಮಿಷನರ್ ವಿರುದ್ಧ ಚಾಟಿ ಬೀಸಿದೆ.

ಅಗ್ನಿ ಅವಘಡಕ್ಕೆ ಗುತ್ತಿಗೆದಾರರನ್ನು ಮಾತ್ರ ಏಕೆ ದೂಷಿಸಲಾಗುತ್ತಿದೆ? ಇಂತಹ ಸಂದರ್ಭಗಳಲ್ಲಿ ಜವಾಬ್ದಾರಿಯುತ ಅಧಿಕಾರಿಗಳನ್ನು ಸಹ ಬಿಡುವುದಿಲ್ಲ ಎಂದು ಕೋರ್ಟ್ ಎಚ್ಚರಿಕೆ ನೀಡಿದೆ.

ಅಫಿಡವಿಟ್ ಸಲ್ಲಿಸಲು ಹೆಚ್ಚಿನ ಕಾಲಾವಕಾಶ ಕೇಳಿದ ಅಧಿಕಾರಿಗಳ ವಿರುದ್ಧವೂ ನ್ಯಾಯಾಲಯ ತೀವ್ರ ಅಸಮಾಧಾನ ಹೊರಹಾಕಿದೆ. ಈ ವೇಳೆ ರಾಜ್‍ಕೋಟ್ ಅಗ್ನಿ ಅವಘಡ ನಿಮಗೆ ಚಿಕ್ಕದೆನಿಸುತ್ತಿದೆ. ನಿಮಗೆ ನಾಚಿಕೆಯಾಗುವುದಿಲ್ಲವೇ? ಸಮಯಕ್ಕೆ ಸರಿಯಾಗಿ ಅಫಿಡವಿಟ್ ಸಲ್ಲಿಸುವಂತೆ ಆದೇಶಿಸಿತು.

ಮೊರ್ಬಿ, ಹರ್ನಿ ಸೇರಿದಂತೆ ಇಂತಹ ಘಟನೆಗಳು ನಡೆಯುತ್ತಲೇ ಇರುತ್ತವೆ. ಪಾಲಿಕೆ ಆಯುಕ್ತರುನಿದ್ದೆ ಮಾಡುತ್ತಿದ್ದಾರೆ. ಇದರಿಂದ ನಿರ್ಲಕ್ಷ್ಯದಿಂದ ಅವಘಡಗಳು ಸಂಭವಿಸುತ್ತಿವೆ. ಈಗ ಯಾವುದೇ ಪೌರಾಯುಕ್ತರಿಗೆ ಅವಕಾಶ ನೀಡುವುದಿಲ್ಲ ಎಂದು ಮುಖ್ಯ ನ್ಯಾಯಮೂರ್ತಿ ನೇತೃತ್ವದ ದ್ವಿಸದಸ್ಯ ಪೀಠ ಹೇಳಿದೆ.

ಮೇ 25 ರಂದು ರಾಜ್‍ಕೋಟ್‍ನ ಟಿಆರ್‍ಪಿ ಗೇಮಿಂಗ್ ಝೋನ್‍ನಲ್ಲಿ ಸಂಭವಿಸಿದ್ದ ಅಗ್ನಿ ಅವಘಡದಲ್ಲಿ ಮಕ್ಕಳು ಸೇರಿದಂತೆ 28 ಜನ ಸಾವನ್ನಪ್ಪಿದ್ದರು. ಈ ಪ್ರಕರಣದ ತನಿಖೆ ನಡೆಸಿದಾಗ, ಅಗ್ನಿಶಾಮಕ ಪರವಾನಗಿ ಇಲ್ಲದೆ ಕಾರ್ಯನಿರ್ವಹಿಸುತ್ತಿರುವುದು ತನಿಖೆಯಿಂದ ತಿಳಿದುಬಂದಿತ್ತು. ಅಲ್ಲದೇ ರಾಜ್‍ಕೋಟ್‍ನಲ್ಲಿ ಎರಡು ಇತರ ಗೇಮಿಂಗ್ ಝೋನ್‍ಗಳು ಅಗ್ನಿ ಸುರಕ್ಷತೆ ಪ್ರಮಾಣಪತ್ರಗಳನ್ನು ಒಳಗೊಂಡಂತೆ ಪರವಾನಗಿ ಇಲ್ಲದೆ ಎರಡು ವರ್ಷಗಳಿಂದ ಕಾರ್ಯನಿರ್ವಹಿಸುತ್ತಿವೆ ಎಂಬ ವಿಚಾರವಾಗಿ ಹೈಕೋರ್ಟ್ ಹಿಂದಿನ ವಿಚಾರಣೆಯಲ್ಲಿ ಸರ್ಕಾರವನ್ನು ತೀವ್ರ ತರಾಟೆಗೆ ತೆಗೆದುಕೊಂಡಿತ್ತು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!