ಹೊಸದಿಗಂತ ವರದಿ, ಮಳವಳ್ಳಿ:
ಟೆಂಪೋ ಟ್ರಾವೆಲ್ ವಾಹನವನ್ನು ಚಾಲನೆ ಮಾಡಲು ಮುಂದಾದ ವೇಳೆ ಆಕಸ್ಮಿಕವಾಗಿ ಸಂಭವಿಸಿದ ಶಾರ್ಟ್ ಸರ್ಕ್ಯೂಟ್‌ನಿಂದ ಟೆಂಪೋ ಟ್ರಾವೆಲ್ ಸುಟ್ಟು ಭಸ್ಮವಾಗಿರುವ ಘಟನೆ ತಾಲ್ಲೂಕಿನ ರಾಗಿಬೊಮ್ಮನಹಳ್ಳಿ ಗೇಟ್ ಬಳಿ ನಡೆದಿದೆ.
ಮಳವಳ್ಳಿ-ಮೈಸೂರು ರಸ್ತೆಯ ತಾಲ್ಲೂಕಿನ ರಾಗಿಬೊಮ್ಮನಹಳ್ಳಿ ಗೇಟ್ ಬಳಿ ಕಳೆದ ಒಂದು ತಿಂಗಳಿಂದ ಆಂಧ್ರಪ್ರದೇಶದ ಮೂಲದ ನಾಲ್ಕೈದು ಮಂದಿ ಟೆಂಪೋ ಟ್ರಾವೆಲ್ ನಲ್ಲಿ ಗಿಡ ಮೂಲಿಕೆ ಔಷಧಿ ಮಾರಾಟ ಮಾಡುತ್ತಿದ್ದರು. ಬಿಸಿಲಿನ ತಾಪದಿಂದ ನಿಂತಿದ್ದ ಟೆಂಪೋ ಟ್ರಾವೆಲ್ ವಾಹನವನ್ನು ಚಾಲನೆ ಮಾಡಲು ಚಾಲಕ ಮುಂದಾಗಿದ್ದು, ಈ ವೇಳೆ ಆಕಸ್ಮಿಕವಾಗಿ ಶಾರ್ಟ್ ಸರ್ಕ್ಯೂಟ್ ಆಗಿದೆ ಎನ್ನಲಾಗಿದ್ದು, ಕೂಡಲೇ ಆಗ್ನಿ ಶಾಮಕ ದಳಕ್ಕೆ ಸಿಬ್ಬಂದಿ ಸ್ಥಳಕ್ಕೆ ಬರುವಷ್ಟರಲ್ಲಿ ಟೆಂಪೋ ಟ್ರಾವೆಲ್ ಸಂಪೂರ್ಣವಾಗಿ ಸುಟ್ಟು ಹೋಗಿದ್ದು, ಟೆಂಪೋ ದಲ್ಲಿದ್ದ 1 ಲಕ್ಷ ನಗದು, 40 ಗ್ರಾಂ ತೂಕದ ಚಿನ್ನಾಭರಣ ಸುಟ್ಟು ಹೋಗಿವೆ ಎಂದು ಮಾಲೀಕ ಜಿತೇಂದ್ರ ಸಿಂಗ್ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.
ಈ ಸಂಬಂಧ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.