February 5, 2026
Thursday, February 5, 2026
spot_img

ಗೇರು ನೆಡುತೋಪಿಗೆ ಬೆಂಕಿ: ಅಪಾರ ಪ್ರಮಾಣದ ಗಿಡಗಳು ಸುಟ್ಟು ಭಸ್ಮ

ಹೊಸದಿಗಂತ ವರದಿ,ಅಂಕೋಲಾ:

ತಾಲೂಕಿನ ಹೊಸಗದ್ದೆಯಲ್ಲಿ ಅರಣ್ಯ ಇಲಾಖೆಯಿಂದ ಗುತ್ತಿಗೆ ನೀಡಲಾಗಿರುವ ಗೇರು ನೆಡುತೋಪಿಗೆ ಬೆಂಕಿ ಬಿದ್ದು ಅಪಾರ ಪ್ರಮಾಣದಲ್ಲಿ ಹಾನಿ ಸಂಭವಿಸಿದೆ.

ಅಂಕೋಲಾ ವಲಯದ ಹೊಸಗದ್ದೆ ಗ್ರಾಮ ಅರಣ್ಯ ವ್ಯಾಪ್ತಿಯ ಸುಮಾರು 10 ಹೆಕ್ಟರ್ ಬೇಣವನ್ನು ಈ ಬಾರಿಯ ಗೇರು ಬೆಳೆಯ ವ್ಯಾಪಾರ ವಹಿವಾಟಿಗಾಗಿ ಕೊಗ್ರೆಯ ಸಂತೋಷ ಆಗೇರ ಎನ್ನುವವರು ಗುತ್ತಿಗೆ ಪಡೆದಿದ್ದು ಬೇಣದ ನಿರ್ವಹಣೆಯನ್ನು ನೋಡಿಕೊಳ್ಳುತ್ತಿದ್ದರು.

ನೆಡು ತೋಪಿನಲ್ಲಿ ಇರುವ ನೂರಾರು ಗಿಡಗಳು ಹೂವು ಬಿಟ್ಟು ನಿಂತ ಸಂದರ್ಭದಲ್ಲೇ ಬೇಣದಲ್ಲಿರುವ ಒಣ ಹುಲ್ಲಿಗೆ ಬೆಂಕಿ ಹೊತ್ತಿಕೊಂಡು ಕೆಲವೇ ಕ್ಷಣದಲ್ಲಿ ನೆಡುತೋಪಿಗೆ ಆವರಿಸಿಕೊಂಡ ಕಾರಣ ನೂರಾರು ಗೇರು ಗಿಡಗಳು ಸುಟ್ಟು ಕರುಕಲಾಗಿದ್ದು ಬೆಂಕಿಯ ಜ್ವಾಲೆಗೆ ಗೇರು ಗಿಡಗಳ ಎಲೆ, ಹೂವುಗಳು ಬಾಡಿ ಹೋಗಿ ಫಸಲು ಬಾರದಂತಾಗಿದೆ.

ಅರಣ್ಯ ಇಲಾಖೆಯ ಸಿಬ್ಬಂದಿಗಳು
ಅಗ್ನಿಶಾಮಕ ದಳದವರು ಬೆಂಕಿ ಆರಿಸಲು ಹರಸಾಹಸ ಪಟ್ಟಿದ್ದು ಬೆಂಕಿ ಹೊತ್ತಿಕೊಳ್ಳಲು ನಿಖರ ಕಾರಣಗಳು ತಿಳಿದು ಬಂದಿಲ್ಲ. ಬೇಸಿಗೆ ಕಾಲ ಆರಂಭವಾಗಿದ್ದು ಅರಣ್ಯ ವ್ಯಾಪ್ತಿಯ ಬೇಣದ ಪ್ರದೇಶಗಳಲ್ಲಿ ಕರಡ ಜಾತಿಯ ಒಣ ಹುಲ್ಲು ಒಣಗಿ ನಿಂತಿದ್ದು ಸಣ್ಣ ಬೆಂಕಿಯ ಕಿಡಿ ಹಲವಾರು ಎಕರೆ ಗಿಡಮರಗಳ ನಾಶಕ್ಕೆ ಕಾರಣವಾಗುತ್ತಿದೆ.

ಗೇರು ನೆಡುತೋಪು ಬೆಂಕಿಗಾಹುತಿಯಾದ ಸ್ಥಳದಲ್ಲಿ ಸಣ್ಣ ಪ್ರಮಾಣದಲ್ಲಿ ಬೆಂಕಿ ಕಾಣಿಸಿಕೊಂಡಿದ್ದು ಅದನ್ನು ಆರಿಸಲಾಗಿತ್ತು ಎನ್ನಲಾಗುತ್ತಿದ್ದು ಬೆಂಕಿ ಸರಿಯಾಗಿ ಆರದೇ ವ್ಯಾಪಿಸಿಕೊಂಡಿರುವ ಸಾಧ್ಯತೆ ಇದ್ದು ಯಾರಾದರೂ ಧೂಮಪಾನ ಮಾಡಿ ಎಸೆದ ಬೀಡಿ,ಸಿಗರೇಟು ತುಂಡು, ಬೆಂಕಿ ಕಡ್ಡಿ ಹುಲ್ಲಿಗೆ ತಾಗಿ ಉಳಿದಿರುವ ಸಾಧ್ಯತೆಯೂ ಇದೆ.
ಕಳೆದ ವರ್ಷ ಸಹ ಇದೇ ನೆಡುತೋಪಿಗೆ ಬೆಂಕಿ ತಗುಲಿ ಹಾನಿ ಸಂಭವಿಸಿತ್ತು.

ಹಾನಿಯ ಕುರಿತಂತೆ ನಿಖರ ಮಾಹಿತಿ ಲಭ್ಯವಾಗಬೇಕಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !