ಹೊಸದಿಗಂತ, ಮಂಗಳೂರು:
ಕುದುರೆಮುಖ ರಾಷ್ಟ್ರೀಯ ಉದ್ಯಾನವನದ ಬೆಳ್ತಂಗಡಿ ವನ್ಯಜೀವಿ ವಿಭಾಗದ ಅರಣ್ಯ ಭಾಗದಲ್ಲಿ ಬೆಂಕಿ ಕಾಣಿಸಿಕೊಂಡಿದ್ದು ಅದನ್ನು ಹತೋಟಿಗೆ ತರಲು ಇಲಾಖೆ ಹರಸಾಹಸ ನಡೆಸುತ್ತಿದೆ.
ಕುದುರೆಮುಖ ಪೀಕ್ ಕಡೆಯಿಂದ ಶನಿವಾರ ಸಂಜೆ ಬೆಂಕಿ ಆವರಿಸ ತೊಡಗಿದ್ದು ನಾವೂರು ಗ್ರಾಮದ ತೊಳಲಿ ಏಳು ಸುತ್ತು ಎಂಬಲ್ಲಿಯವರೆಗೆ ವ್ಯಾಪಿಸಿದೆ. ವನ್ಯಜೀವಿ ವಿಭಾಗದ ಅರಣ್ಯದಲ್ಲಿ ಸಾಕಷ್ಟು ಒಣಗಿದ ಹುಲ್ಲು ಇರುವುದು ಬೆಂಕಿ ವೇಗವಾಗಿ ಹರಡಲು ಕಾರಣವಾಗುತ್ತಿದ್ದರೆ, ನಿಯಂತ್ರಿಸಲು ಅಡ್ಡಿಯಾಗುತ್ತಿದೆ. ನಾವೂರು ಮುಖ್ಯರಸ್ತೆಯಿಂದ ಸುಮಾರು 10 ಕಿ.ಮೀ. ದೂರದಲ್ಲಿ ಬೆಂಕಿ ಕಂಡುಬಂದಿದ್ದು ಇಲ್ಲಿಗೆ 8 ಕಿ.ಮೀ.ಕಾಲ್ನಡಿಗೆ ಮೂಲಕವೇ ಸಾಗಬೇಕಾಗಿದೆ. ಅರಣ್ಯದಲ್ಲಿ ನೀರಿನ ವ್ಯವಸ್ಥೆ ಇಲ್ಲದಿರುವುದು ಅಗತ್ಯ ಸಲಕರಣೆಗಳನ್ನು ಒಯ್ಯಲು ಅಸಾಧ್ಯವಾಗಿರುವುದರಿಂದ ಈ ಪರಿಸರದಲ್ಲಿ ಸೊಪ್ಪಿನ ಮೂಲಕ ಹೊಡೆದು ಬೆಂಕಿ ನಂದಿಸಬೇಕಿದೆ.
ಬೆಳ್ತಂಗಡಿ ವನ್ಯಜೀವಿ ವಿಭಾಗದ ಪ್ರಭಾರ ಆರ್‌ಎಫ್‌ಒ ರಾಘವೇಂದ್ರ ಮತ್ತು ಸಿಬ್ಬಂದಿಗಳು ಭಾನುವಾರ ಬೆಳಗಿನ ಜಾವವೇ ಕಾರ್ಯಾಚರಣೆಗೆ ತೆರಳಿದ್ದು ಬೆಂಕಿ ಇನ್ನಷ್ಟು ಹರಡದಂತೆ ಕ್ರಮ ಕೈಗೊಂಡಿದ್ದಾರೆ ಇನ್ನೊಂದು ಭಾಗದಿಂದ ಕುದುರೆಮುಖ ಕಡೆಯ ಸಿಬ್ಬಂದಿ ಕಾರ್ಯಾಚರಣೆ ನಡೆಸುತ್ತಿದ್ದಾರೆ. ಸಂಜೆ ವೇಳೆ ಕುದುರೆಮುಖ ವನ್ಯಜೀವಿ ವಿಭಾಗದ ಅರಣ್ಯ ಉಪ ಸಂರಕ್ಷಣಾಧಿಕಾರಿ ಶಿವರಾಮ್ ಬಾಬು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿರುವ ಕುರಿತು ತಿಳಿದು ಬಂದಿದೆ. ಕಾರ್ಯಾಚರಣೆಗೆ ಉರಿ ಬಿಸಿಲು ಹಾಗೂ ಗಾಳಿ ಬೀಸುತ್ತಿರುವುದು ಅಡಚಣೆ ನೀಡುತ್ತಿದೆ. ಪರಿಸರದಲ್ಲಿ ಮೊಬೈಲ್ ನೆಟ್‌ವರ್ಕ್ ಇಲ್ಲದಿರುವುದು ಸಮಸ್ಯೆಯಾಗಿದೆ. ಕಳೆದ ವರ್ಷ ಈ ಭಾಗದಲ್ಲಿ ಬೆಂಕಿ ಕಾಣಿಸಿಕೊಂಡು ಕಾಡ್ಗಿಚ್ಚು ನಿರ್ಮಾಣವಾಗಿ ಅರಣ್ಯ ನಾಶ ಉಂಟಾಗಿತ್ತು.
ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ
ಆದಷ್ಟು ತ್ವರಿತವಾಗಿ ಬೆಂಕಿ ನಂದಿಸುವ ಕಾರ್ಯ ಆಗಬೇಕು.. ಕಾಡು ಬೆಳೆಸುವುದು ತುಂಬಾ ಕಷ್ಟದ ಕೆಲಸ. ಅರಣ್ಯ ರಕ್ಷಣಾ ಸಿಬ್ವಂದಿ ಬೇರೆ ತರಹದ ಈ ಘಟನೆಗಳನ್ನು ಪತ್ತೆ ಹಚ್ಚುವ ಕಾರ್ಯ ಮಾಡಲು ಪರ್ಯಾಯ ಮಾರ್ಗಗಳನ್ನು ಹುಡುಕಬೆಈಕು.