ಹೊಸದಿಗಂತ, ಶಿವಮೊಗ್ಗ:
ನಗರದ ಶಂಕರ ಮಠ ರಸ್ತೆಯಲ್ಲಿನ ರಾಹುಲ್ ಹುಂಡೈ ಕಾರ್ ಶೋ ರೂಂಗೆ ಬೆಂಕಿ ಹೊತ್ತಿಕೊಂಡು ಕಾರುಗಳು ಭಸ್ಮವಾಗಿರುವ ಘಟನೆ ಶನಿವಾರ ರಾತ್ರಿ ಸಂಭವಿಸಿದೆ.
ರಾತ್ರಿ ಸುಮಾರು 10 ಗಂಟೆ ಸುಮಾರಿಗೆ ಶೋರೂಂನ ನೆಲಮಾಳಿಗೆಯಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ನೋಡನೋಡುತ್ತಿದ್ದಂತೆ ಕ್ಷಣಾರ್ಧದಲ್ಲಿ ಇಡೀ ಶೋರೂಂಗೆ ಆವರಿಸಿಕೊಂಡು ಇಡೀ ಕಟ್ಟಡವೇ ಬೆಂಕಿಯಲ್ಲಿ ಧಗಧಗಿಸಿದೆ. ನಗರದಲ್ಲಿರುವ 5 ಅಗ್ನಿ ಶಾಮಕದಳದ ಸಿಬ್ಬಂದಿಗಳು ಬೆಂಕಿ ನಂದಿಸಲು ಧಾವಿಸಿ ಬಂದಿದ್ದು, ಶಿಕಾರಿಪುರ, ಭದ್ರಾವತಿಯಿಂದಲೂ ಹೆಚ್ಚುವರಿಯಾಗಿ ಅಗ್ನಿ ಶಾಮಕ ವಾಹನಗಳನ್ನು ಕರೆಯಿಸಲಾಗಿತ್ತು.
ಈ ರಸ್ತೆಯಲ್ಲಿ ಕಾರ್ ಹಾಗೂ ಬೈಕ್ ಶೋ ರೂಂಗಳು ಹೆಚ್ವಿನ ಸಂಖ್ಯೆಯಲ್ಲಿದೆ. ಜೊತೆಗೆ ಸಮೀಪದಲ್ಲಿಯೇ ಪೆಟ್ರೋಲ್ ಬಂಕ್ ಕೂಡ ಇರುವುದರಿಂದ ಆತಂಕ ಇನ್ನಷ್ಟು ಹೆಚ್ಚಿದೆ. ಪೊಲೀಸ್ ಹಾಗೂ ಅಗ್ನಿಶಾಮಕ ದಳದ ಸಿಬ್ಬಂದಿಗಳು ಸ್ಥಳದಲ್ಲಿಯೇ ಮೊಕ್ಕಾಂ ಮಾಡಿ ಪರಿಸ್ಥಿತಿ ನಿಯಂತ್ರಿಸಲು ಮುಂದಾಗಿದ್ದರು.