ಹೊಸದಿಗಂತ ಡಿಜಿಟಲ್ ಡೆಸ್ಕ್:
ಅಗ್ನಿವೀರರಿಗೆ ರಾಜ್ಯ ಪೊಲೀಸ್ ಇಲಾಖೆಯಲ್ಲಿ ಶೇ 20ರಷ್ಟು ಮೀಸಲಾತಿ ನೀಡುವುದಾಗಿ ಸಿಕ್ಕಿಂ ಮುಖ್ಯಮಂತ್ರಿ ಪ್ರೇಮ್ ಸಿಂಗ್ ತಮಾಂಗ್ ಘೋಷಿಸಿದ್ದಾರೆ.
ವಿಕಸಿತ್ ಭಾರತ್ 2047 – ಸೇನೆ ನಾಗರಿಕ ಸಮ್ಮಿಲನ 2025 ಕಾರ್ಯಕ್ರಮದಲ್ಲಿ ಪಾಲ್ಗೊಂಡು ಈ ನಿರ್ಧಾರದ ಕುರಿತು ಮಾಹಿತಿ ನೀಡಿದ್ದಾರೆ.
ಸೇನೆಯಿಂದ ನಿವೃತ್ತರಾದವರು ಪೊಲೀಸ್ ಇಲಾಖೆಯಲ್ಲಿನ ಖಾಲಿ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಈವರೆಗೂ ಇದ್ದ ಗರಿಷ್ಠ ವಯೋಮಿತಿಯನ್ನು 10 ವರ್ಷಗಳಷ್ಟು ಸಡಿಲಿಸಲಾಗಿದೆ. ಮಾಜಿ ಯೋಧರು ಈಗ ಅವರ 50ರ ವಯೋಮಾನದವರೆಗೂ ಅರ್ಜಿ ಸಲ್ಲಿಸಲು ಅರ್ಹರು ಎಂದು ಹೇಳಿದ್ದಾರೆ.
ಗಡಿಯನ್ನು ರಕ್ಷಿಸುವಲ್ಲಿ ಸೈನಿಕರ ಪಾತ್ರ ಮಹತ್ವದ್ದು. ಅದರಲ್ಲೂ ಸಾಮಾಜಿಕ ಮತ್ತು ಆರ್ಥಿಕವಾಗಿ ರಾಜ್ಯವನ್ನು ಬಲಿಷ್ಠವಾಗಿಸುವಲ್ಲೂ ಇವರ ಯೋಗದಾನವಿದೆ ಎಂದರಲ್ಲದೆ, 2023ರಲ್ಲಿ ಸಂಭವಿಸಿದ ತೀಸ್ತಾ ನದಿ ಪ್ರವಾಹ ಸಂದರ್ಭದಲ್ಲಿ ಸೈನಿಕರು ಆಗಿನ ಪರಿಸ್ಥಿತಿಯನ್ನು ಉತ್ತಮವಾಗಿ ನಿರ್ವಹಿಸಿದ್ದನ್ನು ನೆನಪಿಸಿಕೊಂಡು ಶ್ಲಾಘಿಸಿದರು.