ಹೊಸದಿಗಂತ ವರದಿ,ಶಿವಮೊಗ್ಗ:
ಹೃದಯ ಸಂಬಂಧಿ ಸಮಸ್ಯೆಯಿಂದ ಬಳಲುತ್ತಿರುವ ಬಾಲಕನ ಆಸೆಯಂತೆ ಇನ್ಸ್ ಪೆಕ್ಟರ್ ಆಗಿ ಕಾರ್ಯನಿರ್ವಹಿಸುವ ಅವಕಾಶ ನೀಡಿ ಜಿಲ್ಲಾ ಪೊಲೀಸ್ ಇಲಾಖೆ ಮಾನವೀಯತೆಯ ಸ್ಪರ್ಶ ನೀಡಿದೆ.
ಚಿಕ್ಕಮಗಳೂರು ಜಿಲ್ಲೆ ಬಾಳೆಹೊನ್ನೂರು ನಿವಾಸಿ ತಾಬ್ರೇಜ್ ಖಾನ್ ಅವರ ಪುತ್ರ ಆಜಾನ್ ಖಾನ್ ಇನ್ಸ್ ಪೆಕ್ಟರ್ ಆಗಿ ಆಸೆ ಈಡೇರಿಸಿಕೊಂಡ ಬಾಲಕ.
ಬುಧವಾರ ಸಂಜೆ ಸಮವಸ್ತ್ರದಲ್ಲಿ ಆಗಮಿಸಿದ ಬಾಲಕನನ್ನು ಇನ್ಸ್ಪೆಕ್ಟರ್ ಜೀಪ್ ನಲ್ಲಿ ಕರೆತಂದರು.
ಖುದ್ದು ಸ್ವಾಗತಿಸಿದ ಎಸ್ಪಿ ಮಿಥುನ್ ಕುಮಾರ್
ದೊಡ್ಡಪೇಟೆ ಠಾಣೆಗೆ ಆಗಮಿಸಿದ ಬಾಲಕನನ್ನು ಖುದ್ದು ಎಸ್ಪಿ ಮಿಥುನ್ ಕುಮಾರ್ ಹೂಗುಚ್ಛ ನೀಡಿ ಸ್ಚಾಗತಿಸಿದರು. ಎಎಸ್ಪಿ ಅನಿಲ್ ಕುಮಾರ್ ಭೂಮರೆಡ್ಡಿ, ಇನ್ಸ್ ಪೆಕ್ಟರ್ ಅಂಜನ್ ಕುಮಾರ್ ಇನ್ನಿತರ ಸಿಬ್ಬಂದಿ ಹಾಜರಿದ್ದರು. ಇನ್ಸ್ ಪೆಕ್ಟರ್ ಚೇರ್ ನಲ್ಲಿ ಕುಳಿತು ಒಂದು ಗಂಟೆ ಕಾಲ ಆಜಾನ್ ಖಾನ್ ಕಾರ್ಯನಿರ್ವಹಿಸಿದರು.
ಈ ವೇಳೆ ಮಾತನಾಡಿದ ಬಾಲಕ, ನಾನು ಒಂದನೇ ತರಗತಿ ಓದುತ್ತಿದ್ದೇನೆ. ಎಸ್ಪಿ ಆಗಬೇಕು ಅಂತ ಆಸೆ ಇದೆ. ಒಂದು ದಿನ ಪೊಲೀಸ್ ಆಗಬೇಕು ಅಂತ ಅಪ್ಪ- ಅಮ್ಮ ಹತ್ತಿರ ಹೇಳಿದೆ. ಅದು ಈಗ ಈಡೇರಿದೆ. ತುಂಬಾ ಖುಷಿ ಆಗ್ತಾ ಇದೆ ಎಂದು ತಿಳಿಸಿದ.
ಬ್ಲೂ ಬಾಯ್ ಸಿಂಡ್ರೋಮ್…
ಬಾಲಕ ಜನಿಸುವಾಗ ಹೃದಯ ಪೂರ್ಣ ಬೆಳವಣಿಗೆ ಆಗಿರಲಿಲ್ಲ. ಇದಕ್ಕೆ ಬ್ಲೂ ಬಾಯ್ ಸಿಂಡ್ರೋಮ್ ಎಂದು ಕರೆಯುತ್ತಾರೆ ಎಂದು ವೈದ್ಯರು ಹೇಳಿದ್ದಾರೆ. ಎಲ್ಲಾ ಮಕ್ಕಳು ಇರುವಂತೆ ಈತ ಇಲ್ಲ.
ಬೆಂಗಳೂರು ನಾರಾಯಣ ಹೃದಲಾಯದಲ್ಲಿ ಆಂಜಿಯೋಗ್ರಾಂ ಮಾಡಿದ್ದಾರೆ. ಇನ್ನೂ ಶಸ್ತ್ರ ಚಿಕಿತ್ಸೆ ಮಾಡಬೇಕು ಎಂದು ವೈದ್ಯರು ಹೇಳಿದ್ದಾರೆ ಎಂದು ಬಾಲಕನ ತಂದೆ ತಬ್ರೇಜ್ ಖಾನ್ ತಿಳಿಸಿದರು.
ಇದೊಂದು ವಿಶೇಷ ಸಂದರ್ಭ. ಇಲಾಖೆಯ ಸಿಬ್ಬಂದಿ ಮೂಲಕ ವಿಷಯ ತಿಳಿಯಿತು. ಬಾಲಕನ ಆಸೆ ಈಡೇರಿಸಬೇಕು ಎಂದು ಅವಕಾಶ ನೀಡಿದ್ದೇವೆ. ಇದರಿಂದ ಎಲ್ಲರಿಗೂ ಖುಷಿ ಆಗಿದೆ ಎಂದು ಎಸ್ಪಿ ಮಿಥುನ್ ಕುಮಾರ್ ಹೇಳಿದರು.