ಹೊಸದಿಗಂತ ತುಮಕೂರು:
ಕಲ್ಪತರು ನಾಡು ತುಮಕೂರು ಇದೇ ಮೊದಲ ಬಾರಿಗೆ ಅಂತರಾಷ್ಟ್ರೀಯ ಮಟ್ಟದ ಟೆನಿಸ್ ಕ್ರೀಡಾಕೂಟಕ್ಕೆ ಸಾಕ್ಷಿಯಾಗಲಿದೆ. ಮೇ 3ರಿಂದ 10ರವರೆಗೆ ನಡೆಯಲಿರುವ ‘ಅಂತರಾಷ್ಟ್ರೀಯ ತುಮಕೂರು ಮಹಿಳಾ ಓಪನ್ ಟೆನಿಸ್ ಚಾಂಪಿಯನ್ ಷಿಪ್’ ಕುರಿತು ಜಿಲ್ಲಾ ಉಸ್ತುವಾರಿ ಹಾಗೂ ಗೃಹ ಸಚಿವ ಡಾ. ಜಿ. ಪರಮೇಶ್ವರ ಅವರು ಶನಿವಾರ ಮಾಹಿತಿ ನೀಡಿದರು.

ಸುಮಾರು 12 ದೇಶಗಳ 100ಕ್ಕೂ ಹೆಚ್ಚು ಖ್ಯಾತ ಟೆನಿಸ್ ಆಟಗಾರ್ತಿಯರು ಈ ಟೂರ್ನಿಯಲ್ಲಿ ಪಾಲ್ಗೊಳ್ಳಲಿದ್ದಾರೆ. ವಿಜೇತರಿಗೆ 30 ಸಾವಿರ ಅಮೆರಿಕಾ ಡಾಲರ್ ನಗದು ಹಾಗೂ 35 ಅಂತರಾಷ್ಟ್ರೀಯ ರ್ಯಾಂಕಿಂಗ್ ಪಾಯಿಂಟ್ಸ್ ಲಭ್ಯವಾಗಲಿದೆ.
ಜಿಲ್ಲಾಡಳಿತ, ತುಮಕೂರು ಟೆನಿಸ್ ಅಸೋಸಿಯೇಷನ್ ಮತ್ತು ಕರ್ನಾಟಕ ಲಾನ್ ಟೆನಿಸ್ ಅಸೋಸಿಯೇಷನ್ (KSLTA) ಜಂಟಿಯಾಗಿ ಈ ಕೂಟವನ್ನು ಆಯೋಜಿಸಿವೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಚಿವರು, “ತುಮಕೂರು ವಿಶ್ವವಿದ್ಯಾಲಯದ ಸಹಕಾರದೊಂದಿಗೆ ವಿಶ್ವದರ್ಜೆಯ ಅಂಕಣಗಳನ್ನು ನಿರ್ಮಿಸಲಾಗಿದೆ. ಅಂತರಾಷ್ಟ್ರೀಯ ಟೆನಿಸ್ ಫೆಡರೇಷನ್ ನಮ್ಮ ಸೌಲಭ್ಯಗಳನ್ನು ಮೆಚ್ಚಿ ಈ ಟೂರ್ನಿ ನಡೆಸಲು ಅನುಮತಿ ನೀಡಿದೆ. ಇದು ನಮ್ಮ ಸ್ಥಳೀಯ ಕ್ರೀಡಾಪಟುಗಳಿಗೆ ದೊಡ್ಡ ಸ್ಫೂರ್ತಿಯಾಗಲಿದೆ,” ಎಂದರು.
ಜಿಲ್ಲೆಯನ್ನು ಕ್ರೀಡಾ ಹಬ್ ಆಗಿ ಪರಿವರ್ತಿಸುವ ನಿಟ್ಟಿನಲ್ಲಿ ಅಂತರಾಷ್ಟ್ರೀಯ ಮಟ್ಟದ ಕ್ರಿಕೆಟ್ ಸ್ಟೇಡಿಯಂ ಕೆಲಸ ಆರಂಭವಾಗಿದೆ. ಇದರೊಂದಿಗೆ ಹಾಕಿ ಕ್ರೀಡಾಂಗಣ ಮತ್ತು ಈಜುಕೊಳ ನಿರ್ಮಾಣಕ್ಕೆ ಜಾಗ ಗುರುತಿಸಲಾಗಿದೆ. ಕ್ರೀಡಾ ಅಭಿವೃದ್ಧಿಗಾಗಿ ಸರ್ಕಾರದಿಂದ ಸುಮಾರು 8 ಕೋಟಿ ರೂ. ಅನುದಾನ ಲಭ್ಯವಾಗಲಿದೆ ಎಂದು ಅವರು ತಿಳಿಸಿದರು.
ಕಾರ್ಯಕ್ರಮದಲ್ಲಿ ಅಂತರಾಷ್ಟ್ರೀಯ ಮಹಿಳಾ ಟೆನಿಸ್ ಕ್ರೀಡಾಕೂಟದ ಲಾಂಛನ ಬಿಡುಗಡೆ ಮಾಡಲಾಯಿತು. ಶಾಸಕ ಜಿ.ಬಿ. ಜ್ಯೋತಿಗಣೇಶ್, ಜಿಲ್ಲಾಧಿಕಾರಿ ಶುಭಕಲ್ಯಾಣ್ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು.



