ಹೊಸದಿಗಂತ ಡಿಜಿಟಲ್ ಡೆಸ್ಕ್:
ಹಳೆ ಮೈಸೂರು ಭಾಗದ ನೀರಾವರಿ ಮತ್ತು ಕುಡಿಯುವ ನೀರಿಗೆ ಜೀವನಾಡಿಯಂತಿರುವ ಕೆಆರ್‌ಎಸ್ ಅಣೆಕಟ್ಟೆ ಇತಿಹಾಸದಲ್ಲಿಯೇ ಇದೇ ಮೊದಲ ಬಾರಿ ಜೂನ್ ತಿಂಗಳಲ್ಲಿ ಸಂಪೂರ್ಣ ಭರ್ತಿಯಾಗಿದೆ. ಈ ಹಿನ್ನಲೆಯಲ್ಲಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸೋಮವಾರ ಅಣೆಕಟ್ಟೆಗೆ ಭೇಟಿ ನೀಡಿ ಕಾವೇರಿ ನದಿಗೆ ಬಾಗಿನ ಅರ್ಪಿಸಲಿದ್ದಾರೆ. ಈ ಮೂಲಕ ಜೂನ್ ತಿಂಗಳಲ್ಲಿ ಬಾಗಿನ ಅರ್ಪಿಸಿದ ಮೊದಲ ಮುಖ್ಯಮಂತ್ರಿ ಎಂಬ ದಾಖಲೆಯೂ ಸಿದ್ದರಾಮಯ್ಯ ಅವರ ಪಾಲಿಗೆ ಬರಲಿದೆ.
ಕಾವೇರಿ ನೀರಾವರಿ ನಿಗಮ ಈ ಹಿನ್ನೆಲೆಯಲ್ಲಿ ಭರದ ಸಿದ್ಧತೆ ನಡೆಸಿದ್ದು, ಅಣೆಕಟ್ಟೆಯ ಸೌಂದರ್ಯ ವೃದ್ಧಿಗೆ ಡ್ಯಾಂಗೆ ಸುಣ್ಣ ಬಣ್ಣ ಹಚ್ಚುವ ಕಾರ್ಯ ಕೂಡ ಆರಂಭಿಸಲಾಗಿದೆ. ಅಣೆಕಟ್ಟೆಯ ಮೇಲ್ಭಾಗದಲ್ಲಿ ಕನ್ನಡ ಬಾವುಟಗಳು ಹಾರಾಡುತ್ತಿದ್ದು, ಸಿಎಂ ಬಾಗಿನ ಅರ್ಪಿಸುವ ಕಾರ್ಯಕ್ರಮಕ್ಕೆ ಭಕ್ತಿ ಮತ್ತು ಗೌರವದ ವಾತಾವರಣ ನಿರ್ಮಾಣವಾಗಿದೆ.
ಬಾಗಿನ ಅರ್ಪಣೆ ಸೋಮವಾರ ಬೆಳಿಗ್ಗೆ 11:30ರ ಅಭಿಜಿತ್ ಮೂಹೂರ್ತದಲ್ಲಿ ನಡೆಯಲಿದೆ. ವೈದಿಕ ಭಾನುಪ್ರಕಾಶ್ ಶರ್ಮ ಅವರ ನೇತೃತ್ವದಲ್ಲಿ ಪೂಜಾ ಕಾರ್ಯಕ್ರಮ ನಡೆಯಲಿದ್ದು, ಸಮಗ್ರ ಧಾರ್ಮಿಕ ವಿಧಿ ವಿಧಾನಗಳೊಂದಿಗೆ ಬಾಗಿನ ಅರ್ಪಣೆ ನಡೆಯಲಿದೆ. 40ಕ್ಕೂ ಹೆಚ್ಚು ಬಾಗಿನ ಮೊರೆಗಳನ್ನು ಸಿದ್ಧಪಡಿಸಲಾಗಿದ್ದು, ನವ ಧಾನ್ಯ, ಅರಿಶಿಣ, ಕುಂಕುಮ, ಸೀರೆ, ಬಳೆಗಳನ್ನು ಸಮರ್ಪಣೆಗಾಗಿ ಇಡಲಾಗಿದೆ.