Tuesday, December 23, 2025

ಟಿ20 ಇತಿಹಾಸದಲ್ಲಿಯೇ ಮೊದಲು: ಒಂದೇ ಓವರ್​ನಲ್ಲಿ 5 ವಿಕೆಟ್ ಉರುಳಿಸಿದ 28 ವರ್ಷದ ವೇಗಿ!

ಹೊಸ ದಿಗಂತ ಡಿಜಿಟಲ್ ಡೆಸ್ಕ್:

ಇಂಡೋನೇಷ್ಯಾದ 28 ವರ್ಷದ ಬಲಗೈ ವೇಗಿ ಗೆಡೆ ಪ್ರಿಯಂಡಾನಾ, ಟಿ20ಐ ಇತಿಹಾಸದಲ್ಲಿಯೇ ಒಂದೇ ಓವರ್‌ನಲ್ಲಿ ಐದು ವಿಕೆಟ್ ಪಡೆದ ಮೊದಲ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.

ಪ್ರಿಯಂಡಾನಾ ಅವರು ಪುರುಷ ಮತ್ತು ಮಹಿಳಾ ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ ಈ ಸಾಧನೆ ಮಾಡಿದ ಮೊದಲನೆಯವರು.

ಲಸಿತ್ ಮಲಿಂಗ, ರಶೀದ್ ಖಾನ್ ಮತ್ತು ಜೇಸನ್ ಹೋಲ್ಡರ್ ಅವರಂತಹ ಆಟಗಾರರು ಒಂದೇ ಓವರ್‌ನಲ್ಲಿ 4 ವಿಕೆಟ್‌ಗಳನ್ನು ಪಡೆಯುವಲ್ಲಿ ಯಶಸ್ವಿಯಾಗಿದ್ದರು. ಆದರೆ, ಇದಕ್ಕೂ ಮೊದಲು ಯಾರೂ ಒಂದೇ ಓವರ್‌ನಲ್ಲಿ 5 ವಿಕೆಟ್‌ಗಳನ್ನು ಪಡೆದಿರಲಿಲ್ಲ.

ಕಾಂಬೋಡಿಯಾ ವಿರುದ್ಧದ ಟಿ20ಐ ಸರಣಿಯ ಮೊದಲ ಪಂದ್ಯದಲ್ಲಿ ಇಂಡೋನೇಷ್ಯಾದ ಬೌಲರ್ ಈ ಸಾಧನೆ ಮಾಡಿದರು. 168 ರನ್‌ಗಳ ಗುರಿಯನ್ನು ಬೆನ್ನಟ್ಟಿದ ಕಾಂಬೋಡಿಯಾ 5 ವಿಕೆಟ್‌ ನಷ್ಟಕ್ಕೆ 106 ರನ್ ಗಳಿಸಿತ್ತು. ಆಗ ಪ್ರಿಯಾಂಡನಾ ತಮ್ಮ ಕ್ಲಿನಿಕಲ್ ಓವರ್ ಆರಂಭಿಸಿದರು. ಅವರು ತಮ್ಮ ಮೊದಲ ಮೂರು ಎಸೆತಗಳಲ್ಲಿ ಶಾ ಅಬ್ರಾರ್ ಹುಸೇನ್, ನಿರ್ಮಲ್‌ಜಿತ್ ಸಿಂಗ್ ಮತ್ತು ಚಾಂಥೋಯೆನ್ ರತನಕ್ ಅವರನ್ನು ಔಟ್ ಮಾಡುವ ಮೂಲಕ ಹ್ಯಾಟ್ರಿಕ್ ವಿಕೆಟ್ ಪಡೆದರು.
ನಾಲ್ಕನೇ ಎಸೆತದಲ್ಲಿ ಡಾಟ್ ಬಾಲ್ ಆದ ನಂತರ ಮೊಂಗ್ದಾರ ಸೋಕ್ ಮತ್ತು ಪೆಲ್ ವೆನ್ನಕ್ ಅವರನ್ನು ಔಟ್ ಮಾಡಿ ಇನಿಂಗ್ಸ್ ಅನ್ನು ಪೂರ್ಣಗೊಳಿಸಿದರು. ಇನಿಂಗ್ಸ್‌ನ 16ನೇ ಓವರ್‌ನಲ್ಲಿ ಈ ಸಾಧನೆ ಮಾಡಿದರು.

ಟಿ20ಐಗಳಲ್ಲಿ ಒಂದೇ ಓವರ್‌ನಲ್ಲಿ 4 ವಿಕೆಟ್‌ ಪಡೆದ ಆಟಗಾರರು

ಲಸಿತ್ ಮಲಿಂಗ (ಶ್ರೀಲಂಕಾ) vs ನ್ಯೂಜಿಲೆಂಡ್, 2019

ರಶೀದ್ ಖಾನ್ (ಅಫ್ಗಾನಿಸ್ತಾನ) vs ಐರ್ಲೆಂಡ್, 2019

ಕರ್ಟಿಸ್ ಕ್ಯಾಂಪರ್ (ಐರ್ಲೆಂಡ್) vs ನೆದರ್ಲ್ಯಾಂಡ್ಸ್, 2021

ಜೇಸನ್ ಹೋಲ್ಡರ್ (ವೆಸ್ಟ್ ಇಂಡೀಸ್) vs ಇಂಗ್ಲೆಂಡ್, 2022

error: Content is protected !!