ಹೊಸದಿಗಂತ ಡಿಜಿಟಲ್ ಡೆಸ್ಕ್:
ಕೇರಳ ರಾಜ್ಯದಲ್ಲಿಯೇ ಮೊದಲ ಬಾರಿಗೆ ಸಿಬಿಐ ಸೈಬರ್ ಅಪರಾಧ ಪ್ರಕರಣ ದಾಖಲಿಸಿದೆ.
ಆನ್‌ಲೈನ್‌ನಲ್ಲಿ ಬರೋಬ್ಬರಿ ೧.೦೪ ಕೋಟಿ ರೂ. ಕಳೆದುಕೊಂಡಿರುವ ಪ್ರಕರಣ ಇದಾಗಿದ್ದು, ಇದರ ತನಿಖೆಯನ್ನು ಸಿಬಿಐ ಕೈಗೆತ್ತಿಕೊಂಡಿದೆ.
೭೦ ವರ್ಷದ ಉದ್ಯಮಿಯೊಬ್ಬರು ಹಣ ಕಳೆದುಕೊಂಡವರಾಗಿದ್ದು, ಜು.೨೦ ಇವರಿಗೆ ಕರೆ ಮಾಡಿದ್ದ ಆಗಂತುಕನೋರ್ವ, ತಾನು ಮುಂಬೈನ ಫೆಕ್ಸ್ ಕೊರಿಯರ್ಸ್‌ನ ಅಜಯ್ ಕುಮಾರ್ ಎಂದು ಪರಿಚಯಿಸಿಕೊಂಡು ರಷ್ಯಾಕ್ಕೆ ಕರೆದೊಯ್ಯಲು ವಯಸ್ಸಾದ ಸಂತ್ರಸ್ಥರ ಹೆಸರಿನಲ್ಲಿ ಬುಕ್ ಮಾಡಲಾದ ಪಾರ್ಸೆಲ್‌ನಲ್ಲಿ ಮಾದಕ ದ್ರವ್ಯಗಳಿವೆ ಮತ್ತು ಕಸ್ಟಮ್ಸ್ ಅದನ್ನು ತಡೆಹಿಡಿದಿದೆ ಎಂದು ನಂಬಿಸಿದ್ದ. ಬಳಿಕ ಮುಂಬೈ ಪೋಲೀಸರ ಸೈಬರ್ ವಿಭಾಗದ ಮತ್ತೊಬ್ಬ ಅಧಿಕಾರಿಗೆ ಪೋನ್ ಹಸ್ತಾಂತರಿಸುತ್ತಿರುವುದಾಗಿ ಹೇಳಿದ್ದು, ತನಿಖೆಯ ಭಾಗವಾಗಿ, ಬ್ಯಾಂಕ್ ಖಾತೆ ಪರಿಶೀಲಿಸಿ ವಂಚಕರು ಒದಗಿಸಿದ ಖಾತೆಗೆ ಅವರ ಸಂಪೂರ್ಣ ಖಾತೆಯ ಹಣವನ್ನು ವರ್ಗಾಯಿಸಲು ಅವರಿಗೆ ಸೂಚಿಸಲಾಯಿತು.
ಜುಲೈ ೨೨ ರಿಂದ ೨೪ ರ ನಡುವೆ, ಉದ್ಯಮಿ ಒಟ್ಟು ೧.೦೪ ಕೋಟಿ ರೂ.ಗಳನ್ನು ವರ್ಗಾಯಿಸಿದ್ದಾರೆ. ಬಳಿಕ ಅವರಿಗೆ ಮೋಸ ಹೋಗಿರುವುದು ಗೊತ್ತಾಗಿದೆ. ಈ ಬಗ್ಗೆ ಅವರು ಪೋಲೀಸರಿಗೆ ದೂರು ನೀಡಿದ್ದು, ತ್ರಿಶೂರ್ ಸೈಬರ್ ಪೋಲೀಸರು ದಾಖಲಿಸಿದ್ದ ಈ ಪ್ರಕರಣವನ್ನು ಮಾರ್ಚ್‌ನಲ್ಲಿ ಹೈಕೋರ್ಟ್ ಆದೇಶದ ಮೇರೆಗೆ ಸಿಬಿಐಗೆ ಹಸ್ತಾಂತರಿಸಲಾಗಿತ್ತು. ಇದೀಗ ಸಿಬಿಐ ತನಿಖೆ ಆರಂಭಿಸಿದೆ.