ಹೊಸ ದಿಗಂತ ಡಿಜಿಟಿಲ್ ಡೆಸ್ಕ್:
ಎಐಸಿಸಿ ಅಖಿಲ ಭಾರತ ಹಿಂದುಳಿದ ವರ್ಗಗಳ ಸಲಹಾ ಸಮಿತಿಯ ಮೊದಲ ಸಭೆ ಅತ್ಯಂತ ಯಶಸ್ವಿಯಾಗಿದೆ ಎಂದು ತಿಳಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.
ಅಖಿಲ ಭಾರತ ಹಿಂದುಳಿದ ವರ್ಗಗಳ ಸಲಹಾ ಸಮಿತಿ ಸಭೆಯ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಸಮಾಜದ ನಿರ್ಲಕ್ಷಿತ ವರ್ಗಗಳಿಗೆ ಸಾಮಾಜಿಕ ನ್ಯಾಯ ಒದಗಿಸಲು ತೋರಿರುವ ಧೈರ್ಯ ಹಾಗೂ ವಿಶೇಷವಾಗಿ ಹಿಂದುಳಿದ ವರ್ಗಗಳ ಬಗ್ಗೆ ತೋರಿರುವ ಕಾಳಜಿಗೆ ಎಐಸಿಸಿ ಒಬಿಸಿ ವಿಭಾಗದ ಸಲಹಾ ಸಮಿತಿಯು, ನ್ಯಾಯ ಯೋಧರಾದ ರಾಹುಲ್ ಗಾಂಧಿಯವರಿಗೆ ಧನ್ಯವಾದಗಳನ್ನು ಅರ್ಪಿಸುತ್ತದೆ ಎಂದರು.
ರಾಹುಲ್ ಗಾಂಧಿ ಅವರ ದೃಢನಿಶ್ಚಯದಿಂದಾಗಿ ಮನುವಾದಿ ಮೋದಿ ಸರ್ಕಾರವನ್ನು ನ್ಯಾಯಯುತ ಮತ್ತು ಸಾಂವಿಧಾನಿಕ ಬೇಡಿಕೆಯಾಗಿದ್ದ ಜಾತಿ ಗಣತಿಯನ್ನು ಭಾರತದಲ್ಲಿ ಕೈಗೊಳ್ಳುವಂತೆ ಮಾಡಿತು. ಈ ಐತಿಹಾಸಿಕ ಸಾಧನೆಗಾಗಿ ಭಾರತದ ಎಲ್ಲಾ ಹಿಂದುಳಿದ ವರ್ಗಗಳ ಪರವಾಗಿ ಸಮಿತಿಯು ಹೃತ್ಪೂರ್ವಕವಾಗಿ ರಾಹುಲ್ ಗಾಂಧಿ ಅವರನ್ನು ಶ್ಲಾಘಿಸುತ್ತದೆ.ಇದೊಂದು ಮೈಲಿಗಲ್ಲಾದರೂ, ಸಂವಿಧಾನದ ಆಶಯದಂತೆ ಸಾಮಾಜಿಕ ನ್ಯಾಯವನ್ನು ಖಾತ್ರಿಪಡಿಸುವ ನಿಟ್ಟಿನಲ್ಲಿ ಇದೊಂದು ಸಣ್ಣ ಹೆಜ್ಜೆ. ನ್ಯಾಯ ಯೋಧ ರಾಹುಲ್ ಗಾಂಧೀಜಿ ಅವರ ಅಚಲ ನಾಯಕತ್ವದಡಿಯಲ್ಲಿ, ಭಾರತವು ಅತ್ಯುನ್ನತ ಸಾಂವಿಧಾನಿಕ ಉದ್ದೇಶವಾದ ಸಾಮಾಜಿಕ ಪರಿವರ್ತನೆಯನ್ನು ಸಾಕಾರಗೊಳಿಸಲಿದೆ. ತನ್ಮೂಲಕ ನಮ್ಮ ಮಹಾನ್ ದೇಶದಲ್ಲಿ ಸಮಸಮಾಜವನ್ನು ನಿರ್ಮಿಸಲು ಇದರಿಂದ ಸಾಧ್ಯವಾಗಲಿದೆ. ನ್ಯಾಯ ಯೋಧರಾದ ರಾಹುಲ್ ಗಾಂಧಿ ಅವರ ಧೀರ ಮತ್ತು ನಿರ್ಭಯ ನಾಯಕತ್ವದಡಿಯಲ್ಲಿ ಕಾಂಗ್ರೆಸ್ ಪಕ್ಷದ ಧ್ವಜವನ್ನು ಹಿಡಿದು ಎಲ್ಲರಿಗೂ ಸಾಮಾಜಿಕ ನ್ಯಾಯ ದೊರಕಿಸಲು ನಿರ್ಧರಿಸಿ, ಹೋರಾಡಲು ನಾವೆಲ್ಲರೂ ಪ್ರಮಾಣ ಮಾಡುತ್ತೇವೆ ಎಂದು ತಿಳಿಸಿದರು.
2015ನೇ ಇಸವಿಯಲ್ಲಿ ನಾನು ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ಸಾಮಾಜಿಕ ಶೈಕ್ಷಣಿಕ ಆರ್ಥಿಕ ಸಮೀಕ್ಷೆ ಕೈಗೊಳ್ಳಲು ಹಿಂದುಳಿದ ವರ್ಗದ ಆಯೋಗಕ್ಕೆ ಆದೇಶ ನೀಡಲಾಗಿತ್ತು. ಕೇವಲ ಹಿಂದುಳಿದ ವರ್ಗವಲ್ಲದೇ ಎಲ್ಲ ಜನರನ್ನು ಸಮೀಕ್ಷೆಗೆ ಒಳಪಡಿಸಲು ಸೂಚನೆ ನೀಡಲಾಗಿದ್ದು, ಆಯೋಗವು ಸಮೀಕ್ಷೆಯನ್ನು ನಡೆಸಿತು. 2018 ರಲ್ಲಿ ಸಮ್ಮಿಶ್ರ ಸರ್ಕಾರದ ಅಧಿಕಾರಕ್ಕೆ ಬಂದಾಗ, ಆಯೋಗದ ಅಧ್ಯಕ್ಷರಾಗಿದ್ದ ಕಾಂತರಾಜು ಅವರು ವರದಿಯನ್ನು ನೀಡಲು ಕಾಲಾವಕಾಶ ನೀಡುವಂತೆ ಅಂದಿನ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿಯವರನ್ನು ಕೋರಿದರು. ಆಯೋಗದ ಕೋರಿಕೆಯನ್ನು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿಯವರು ಮನ್ನಿಸಲಿಲ್ಲ. ಅಂದು ಸಚಿವರಾಗಿದ್ದ ಪುಟ್ಟರಂಗ ಶೆಟ್ಟಿಯವರು ಆಯೋಗಕ್ಕೆ ಕಾಲಾವಕಾಶವನ್ನು ನೀಡಿದರೂ, ವರದಿಯನ್ನು ಸ್ವೀಕರಿಸದಂತೆ ಸಚಿವರಿಗೆ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿಯವರು ಸೂಚನೆ ನೀಡಿದ್ದರ ಬಗ್ಗೆ ಮುಖ್ಯಮಂತ್ರಿಗಳು ಪತ್ರಿಕಾಗೋಷ್ಠಿಯಲ್ಲಿ ವಿವರಿಸಿದರು.
1931 ರ ನಂತರ ಜಾತಿ ಜನಗಣತಿಯನ್ನು ಕೈಗೊಂಡ ಮೊದಲ ರಾಜ್ಯ ಕರ್ನಾಟಕ. ಆದ್ದರಿಂದಲೇ ಅದನ್ನು ‘ಕರ್ನಾಟಕ ಮಾದರಿ’ ಎಂದು ಕರೆಯಲಾಗುತ್ತದೆ ಎಂದು ತಿಳಿಸಿದರು.
ಕಾಂಗ್ರೆಸ್ ಪಕ್ಷ ಎಂದೆಂದಿಗೂ ಸಂವಿಧಾನಕ್ಕೆ ಬದ್ಧವಾಗಿರುತ್ತದೆ. ಅಹಿಂದ ತತ್ವವು ಎಲ್ಲರಿಗೂ ಸಮಪಾಲು, ಸಮಬಾಳು ಎಂಬುದರ ಆಧಾರವಾಗಿದೆ. ಇಂದಿನ ಕಾಲಮಾನದಲ್ಲಿ ಸಾಮಾಜಿಕ, ಆರ್ಥಿಕ, ಶೈಕ್ಷಣಿಕವಾಗಿ ಸಮಾನತೆ ಇಲ್ಲವಾಗಿದ್ದು, ಈ ನಿಟ್ಟಿನಲ್ಲಿ ಹಿಂದುಳಿದ ಸಮುದಾಯಗಳಿಗೆ ಶಕ್ತಿ ತುಂಬಬೇಕಾಗಿದೆ. ನ್ಯಾಯಯೋಧ ರಾಹುಲ್ ಗಾಂಧಿಯವರು ಪ್ರತಿಪಾದಿಸುತ್ತಿರುವ ಜಾತಿಗಣತಿ ಕೇವಲ ಜಾತಿಗಳ ಗಣತಿಯಾಗಿರದೇ, ಅದು ಸಾಮಾಜಿಕ , ಆರ್ಥಿಕ, ಶೈಕ್ಷಣಿಕವಾಗಿ ನಡೆಸುವ ಸಮೀಕ್ಷೆಯಾಗಿದೆ. ಹಿಂದುಳಿದ ಸಮುದಾಯಗಳಿಗೆ ಸಮಾನ ಅವಕಾಶ ಒದಗಿಸುವ ದಿಟ್ಟ ನಿರ್ಧಾರವನ್ನು ಶ್ರೀ ರಾಹುಲ್ ಗಾಂಧಿಯವರು ಕೈಗೊಂಡಿದ್ದಾರೆ ಎಂದರು.