ಹೊಸದಿಗಂತ ಡಿಜಿಟಲ್ ಡೆಸ್ಕ್:
ಶಿವಮೊಗ್ಗ ಜಿಲ್ಲೆಯಲ್ಲಿ ಮಂಗನ ಕಾಯಿಲೆಗೆ ವರ್ಷದ ಮೊದಲ ಬಲಿಯಾಗಿದ್ದು, 18 ವರ್ಷದ ಯುವತಿಯೊಬ್ಬರು ಚಿಕಿತ್ಸೆ ಫಲಿಸದೇ ಮೃತಪಟ್ಟಿದ್ದಾರೆ.
ಜಿಲ್ಲೆಯ ಹೊಸನಗರ ತಾಲೂಕಿನ ಅರಳಿಕೊಪ್ಪ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬೊಪ್ಪನಮನೆ ಗ್ರಾಮದ ನಿವಾಸಿ ಅನನ್ಯ ಮೃತ ಯುವತಿ.
ಚಳಿ ಜ್ವರದಿಂದ ಬಳಲುತ್ತಿದ್ದ ಯುವತಿಯನ್ನು ಮೆಗ್ಗಾನ್ ಆಸ್ಪತ್ರೆಯಲ್ಲಿ ಮೂರು ದಿನ ಚಿಕಿತ್ಸೆ ನೀಡಿದ್ದು, ಹೆಚ್ಚಿನ ಚಿಕಿತ್ಸೆಗೆ ಮಣಿಪಾಲ್ ಕೆಎಂಸಿ ಆಸ್ಪತ್ರೆಗೆ ಪೋಷಕರು ದಾಖಲಿಸಿದ್ದರು. ಆದರೆ ಚಿಕಿತ್ಸೆ ಫಲಿಸದೇ ಇಂದು ಮುಂಜಾನೆ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾಳೆ.
ಶಿವಮೊಗ್ಗ ಡಿಎಓ ರಾಜೇಶ್ ಸುರಗಿಹಳ್ಳಿ ಪ್ರತಿಕ್ರಿಯೆ ನೀಡಿದ್ದು, ಕೆಎಫ್ಡಿ ಪಾಸಿಟಿವ್ ಬಂದಿದ್ದ ಯುವತಿ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾಳೆ. ಡಿ. 27 ಕ್ಕೆ ಜ್ವರದಿಂದ ಯುವತಿ ಬಳಲುತ್ತಿದ್ದಳು. ಮೊದಲು ಮೆಗ್ಗಾನ್ ಜಿಲ್ಲಾಸ್ಪತ್ರೆಗೆ ಬಳಿಕ ಹೆಚ್ಚಿನ ಚಿಕಿತ್ಸೆಗೆ ಮಣಿಪಾಲ ಆಸ್ಪತ್ರೆಗೆ ದಾಖಲು ಮಾಡಿದ್ದಾರೆ. ಇಂದು ಯುವತಿಯು ಮೃತ ಪಟ್ಟಿರುವ ಮಾಹಿತಿ ಸಿಕ್ಕಿದೆ ಎಂದಿದ್ದಾರೆ.
ಹೊಸನಗರದ ಅರಮನೆ ಕೊಪ್ಪ ವ್ಯಾಪ್ತಿಯ ಗ್ರಾಮವೊಂದರ ಯುವತಿಗೆ ವಾರದ ಹಿಂದೆ ಜ್ವರ ಕಾಣಿಸಿಕೊಂಡಿತ್ತು. ಏಕಾಏಕಿ ಜ್ವರ ಉಲ್ಬಣಗೊಂಡು ಶಿವಮೊಗ್ಗ ನಗರದ ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಇಲ್ಲಿ ಕೆಎಫ್ ಡಿ (ಮಂಗನ ಕಾಯಿಲೆ) ಟೆಸ್ಟ್ ನಡೆಸಿದಾಗ ಮೊದಲ ಬಾರಿ ನೆಗೆಟಿವ್ ಬಂದಿತ್ತು. ಪುನಃ ಎರಡನೇ ಬಾರಿ ಪರೀಕ್ಷೆ ಮಾಡಿದಾಗ ಆಕೆಗೆ ಪಾಸಿಟಿವ್ ಬಂದಿತ್ತು. ಮೆಗ್ಗಾನ್ ಆಸ್ಪತ್ರೆಯಲ್ಲಿ ಐಸಿಯುನಲ್ಲಿದ್ದ ಯುವತಿಯನ್ನು ಶುಕ್ರವಾರ ಸಂಜೆ ಮಣಿಪಾಲದ ಆಸ್ಪತ್ರೆಗೆ ದಾಖಲಿಸಲಾಗಿತ್ತು.
ಆದರೆ, ಯುವತಿ ಮಂಗನ ಕಾಯಿಲೆಯಿಂದಾಗಿ ಬಹುಅಂಗಾಂಗ ವೈಫಲ್ಯಕ್ಕೆ ಒಳಗಾಗಿದ್ದಳು. ಹೀಗಾಗಿ, ನಿರಂತರ ಚಿಕಿತ್ಸೆ ಮುಂದುವರೆಸಿದರೂ ಚಿಕಿತ್ಸೆ ಫಲಿಸದೇ ಸೋಮವಾರ ಬೆಳಗ್ಗೆ ಯುವತಿ ಸಾವನ್ನಪ್ಪಿದ್ದಾಳೆ.ಇನ್ನು ಶಿವಮೊಗ್ಗದಲ್ಲಿ ಈವರೆಗೆ ಮೂರು ಮಂದಿಗೆ ಮಂಗನ ಕಾಯಿಲೆ ದೃಢಪಟ್ಟಿದೆ. ಅದರಲ್ಲಿ ಒಬ್ಬರು (ಯುವತಿ) ಮೃತಪಟ್ಟಿದ್ದಾರೆ.