ಹೊಸದಿಗಂತ ವರದಿ ಅಂಕೋಲಾ:
ಮೀನುಗಾರಿಕೆ ದಕ್ಕೆಯಲ್ಲಿ ನಿಲ್ಲಿಸಿದ ಬೋಟಿನಿಂದ ಸಮುದ್ರದ ನೀರಿಗೆ ಬಿದ್ದು ಮೀನುಗಾರ ಕಾರ್ಮಿಕನೋರ್ವ ಮೃತ ಪಟ್ಟ ಘಟನೆ ತಾಲೂಕಿನ ಮಂಜಗುಣಿಯಲ್ಲಿ ನಡೆದಿದೆ.
ಛತ್ತೀಸಗಡ ರಾಜ್ಯದ ರೈಗರ್ ಜಿಲ್ಲೆಯ ಲೈಲೂಂಗಾ ತಾಲೂಕಿನ ಬೀರಬಲ್ ಅಂಗನು (24) ಮೃತ ವ್ಯಕ್ತಿ.
ಮೀನುಗಾರಿಕೆ ಬೋಟಿನಲ್ಲಿ ಕೆಲಸ ಮಾಡುತ್ತಿದ್ದ ಈತ ಏಪ್ರಿಲ್ 12 ರಂದು ರಾತ್ರಿ 10.30 ರಿಂದ 11 ಗಂಟೆ ನಡುವಿನ ಅವಧಿಯಲ್ಲಿ ಮಂಜಗುಣಿ ದಕ್ಕೆಯಲ್ಲಿ ನಿಲ್ಲಿಸಿದ ಐ ಎನ್ ಡಿ ಕೆ.ಎ06 ಎಂ.ಎಂ 2713 ನೋಂದಣಿ ಸಂಖ್ಯೆಯ ಸಿಗಂದೂರು ಚೌಡೇಶ್ವರಿ ಎಂಬ ಹೆಸರಿನ ಬೋಟಿನಿಂದ ಆಯ ತಪ್ಪಿ ನೀರಿಗೆ ಬಿದ್ದು ಮೃತಪಟ್ಟಿದ್ದಾನೆ.
ಆತನ ಮೃತ ದೇಹ ಏಪ್ರಿಲ್ 14 ರಂದು ಮಂಜಗುಣಿ ಕಡಲ ತೀರದಲ್ಲಿ ಪತ್ತೆಯಾಗಿದೆ. ಈ ಕುರಿತು ಅಂಕೋಲಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.