ಹೊಸದಿಗಂತ ಡಿಜಿಟಲ್ ಡೆಸ್ಕ್:
ಮದುವೆ ಸಮಾರಂಭದಿಂದ ಹಿಂದಿರುಗುತ್ತಿದ್ದಾಗ ಕಾರೊಂದು ನಿಯಂತ್ರಣ ತಪ್ಪಿ ಕಾಲುವೆಗೆ ಉರುಳಿಬಿದ್ದ ಪರಿಣಾಮ ಐವರು ಸಾವನ್ನಪ್ಪಿದ್ದು, ಇಬ್ಬರು ಗಂಭೀರ ಗಾಯಗೊಂಡಿರುವ ಘಟನೆ ಉತ್ತರಪ್ರದೇಶ ಲಖಿಂಪುರ ಖೇರಿಯ ಶಾರದಾ ಕಾಲುವೆಯಲ್ಲಿ ನಡೆದಿದೆ.
ಧೇಖೇರ್ವಾ-ಗಿರ್ಜಾಪುರಿ ಹೆದ್ದಾರಿಯ ಪರಾಸ್ ಪೂರ್ವಾ ಗ್ರಾಮದ ಬಳಿ ಬುಧವಾರ ಬೆಳಗಿನ ಜಾವ 1 ಗಂಟೆ ಸುಮಾರಿಗೆ ಈ ಘಟನೆ ಸಂಭವಿಸಿದೆ. ಪ್ರಾಥಮಿಕ ತನಿಖೆಯ ಪ್ರಕಾರ, ಕಾರಿನ ಬಾಗಿಲುಗಳು ಆಟೋಮೆಟಿಕ್ ಲಾಕ್ ಆಗಿದ್ದರಿಂದ, ಪ್ರಯಾಣಿಕರು ಹೊರಬರಲಾಗದೆ ಒಳಗೆ ಸಿಲುಕಿಕೊಂಡಿದ್ದಾರೆ. ಜೋರಾದ ಶಬ್ದ ಮತ್ತು ಸಹಾಯ ಮಾಡಿ ಎಂಬ ಕೂಗು ಕೇಳಿದ ಸ್ಥಳೀಯ ನಿವಾಸಿಗಳು ಸ್ಥಳಕ್ಕೆ ಧಾವಿಸಿದ ವೇಳೆ ಕಾರು ನೀರಿನಲ್ಲಿ ಮುಳುಗಿತ್ತು.
ತಕ್ಷಣವೇ ಗ್ರಾಮಸ್ಥರು ಘಟನೆಯ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಟಾರ್ಚ್‌ಲೈಟ್ ಬಳಸಿ, ದೋಣಿಯೊಂದಿಗೆ ಕಾಲುವೆಗೆ ತೆರಳಿ ಕಾರಿಗೆ ಹಗ್ಗವನ್ನು ಕಟ್ಟಿ ಅದನ್ನು ಹೊರತೆಗೆಯುವಲ್ಲಿ ಯಶಸ್ವಿಯಾಗಿದ್ದಾರೆ. ಬಾಗಿಲುಗಳು ಜಾಮ್ ಆಗಿರುವುದನ್ನು ಕಂಡು ಇಟ್ಟಿಗೆಯಿಂದ ಕಿಟಕಿ ಗಾಜನ್ನು ಒಡೆದು ಪ್ರಯಾಣಿಕರನ್ನು ಹೊರಗೆಳೆಯಲಾಗಿದೆ.
ಘಟನೆ ಬಳಿಕ ಎಲ್ಲಾ ಏಳು ಜನರನ್ನು ರಾಮಿಯಾ ಬೆಹಾರ್‌ನ ಸಿಎಚ್‌ಸಿ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಅಷ್ಟುಹೊತ್ತಿಗಾಗಲೇ ಐವರು ಮೃತಪಟ್ಟಿದ್ದಾರೆ ಎಂದು ವೈದ್ಯರು ಘೋಷಿಸಿದ್ದಾರೆ. ಮೃತರನ್ನು ಜಿತೇಂದ್ರ (23), ಘನಶ್ಯಾಮ್ (25), ಲಾಲ್ಜಿ (45), ಮತ್ತು ಸುರೇಶ್ (50) ಎಂದು ಗುರುತಿಸಲಾಗಿದೆ. ಎಲ್ಲರೂ ಬಹ್ರೈಚ್ ಜಿಲ್ಲೆಯ ನಿವಾಸಿಗಳಾಗಿದ್ದರು. ಮೃತರ ಪೈಕಿ ಒಬ್ಬರ ಗುರುತು ಇನ್ನೂ ಪತ್ತೆಯಾಗಿಲ್ಲ. ಘಟನೆಯಲ್ಲಿ ಕಾರು ಚಾಲಕ ಬಬ್ಲೂ ಮತ್ತು ಇನ್ನೊಬ್ಬ ಪ್ರಯಾಣಿಕ ಬದುಕುಳಿದಿದ್ದು, ಇಬ್ಬರ ಸ್ಥಿತಿಯೂ ಗಂಭೀರವಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಮದುವೆ ಸಮಾರಂಭದಿಂದ ಹಿಂದಿರುಗುತ್ತಿದ್ದಾಗ ಕಾಲುವೆಗೆ ಬಿದ್ದ ಕಾರು: ಐವರ ದುರ್ಮರಣ

