ಹೊಸದಿಗಂತ ಡಿಜಿಟಲ್ ಡೆಸ್ಕ್:
ಆರು ಜನರೊಂದಿಗೆ ನೇಪಾಳದ ಮೌಂಟ್ ಎವರೆಸ್ಟ್ ಬಳಿ ನಾಪತ್ತೆಯಾಗಿದ್ದ ಮನಂಗ್ ಏರ್ ಹೆಲಿಕಾಪ್ಟರ್ ಮಂಗಳವಾರ ಸೊಲುಖುಂಬು ಜಿಲ್ಲೆಯ ಲಿಖುಪಿಕೆ ಗ್ರಾಮೀಣ ಪುರಸಭೆಯ ಲಾಮ್ಜುರಾದಲ್ಲಿ ಪತನಗೊಂಡಿದ್ದು, ಪೈಲಟ್ ಸೇರಿದಂತೆ ಐವರು ಸಾವಿಗೀಡಾಗಿದ್ದಾರೆ. ವಿಮಾನದಲ್ಲಿದ್ದ ಎಲ್ಲಾ ವಿದೇಶಿ ಪ್ರಜೆಗಳು ಮೆಕ್ಸಿಕನ್ನರು ಎಂದು ಮಾಧ್ಯಮ ವರದಿಗಳು ಸೂಚಿಸಿವೆ.
ಗ್ರಾಮಸ್ಥರು ಐದು ಮೃತದೇಹಗಳನ್ನು ಹೊರತೆಗೆದಿದ್ದಾರೆ ಎಂದು ಕೋಶಿ ಪ್ರಾಂತ್ಯದ ಪೊಲೀಸ್ ಡಿಐಜಿ ರಾಜೇಶನಾಥ ಬಸ್ತೋಲಾ ಸುದ್ದಿ ಸಂಸ್ಥೆ ಎಎನ್ಐಗೆ ತಿಳಿಸಿದ್ದಾರೆ. ಹೆಲಿಕಾಪ್ಟರ್ ಬೆಟ್ಟದ ಮೇಲಿರುವ ಮರಕ್ಕೆ ಡಿಕ್ಕಿ ಹೊಡೆದಿದ್ದರಿಂದ ಈ ದುರಂತ ಸಂಭವಿಸಿದೆ.
ಮರುಪಡೆದ ದೇಹಗಳ ಗುರುತುಗಳು ಇನ್ನೂ ಪತ್ತೆಯಾಗಿಲ್ಲ. ಜೊತೆಗೆ ಓರ್ವ ನಾಪತ್ತೆಯಾಗಿದ್ದು, ಶೋಧಕಾರ್ಯಾಚರಣೆ ಶುರುವಾಗಿದೆ. ಆಲ್ಟಿಟ್ಯೂಡ್ ಏರ್ ಹೆಲಿಕಾಪ್ಟರ್ ಕಠ್ಮಂಡುವಿನಿಂದ ರಕ್ಷಣೆಗಾಗಿ ಹೊರಟಿದೆ ಎಂದು ನೇಪಾಳದ ನಾಗರಿಕ ವಿಮಾನಯಾನ ಪ್ರಾಧಿಕಾರ ಟ್ವೀಟ್ ಮಾಡಿದೆ. ಭಾರೀ ಸ್ಫೋಟದೊಂದಿಗೆ ಹೆಲಿಕಾಪ್ಟರ್ ಪತನಗೊಂಡಿದ್ದು, ಅಪಘಾತದ ಸ್ಥಳದಲ್ಲಿ ಬೆಂಕಿ ಕಾಣಿಸಿಕೊಂಡಿದೆ ಎಂದು ಸ್ಥಳೀಯರು ಮಾಹಿತಿ ನೀಡಿದರು.
ಹೆಲಿಕಾಪ್ಟರ್ ಅನ್ನು ಕಠ್ಮಂಡು ಮೂಲದ ಖಾಸಗಿ ಕಂಪನಿ ಮನಂಗ್ ಏರ್ ನಿರ್ವಹಿಸುತ್ತಿದ್ದು, ಪೂರ್ವ ನೇಪಾಳದ ಪರ್ವತ ಸೊಲುಕುಂಬು ಜಿಲ್ಲೆಯಿಂದ ರಾಜಧಾನಿ ಕಠ್ಮಂಡುವಿಗೆ ಐವರು ವಿದೇಶಿ ಪ್ರವಾಸಿಗರನ್ನು ಕರೆದೊಯ್ಯುತ್ತಿತ್ತು. ರಕ್ಷಣಾ ಕಾರ್ಯಾಚರಣೆ ನಡೆಯುತ್ತಿರುವುದರಿಂದ ವಿವರವಾದ ವರದಿ ಬರಬೇಕಿದೆ ಎಂದು ಟಿಐಎಯ ಹಿರಿಯ ಅಧಿಕಾರಿ ತಿಳಿಸಿದ್ದಾರೆ. ಸ್ಥಳದಲ್ಲಿ ಸ್ಥಳೀಯ ಪೊಲೀಸರನ್ನು ಕೂಡ ನಿಯೋಜಿಸಲಾಗಿದೆ.