ಹೊಸದಿಗಂತ ಡಿಜಿಟಲ್ ಡೆಸ್ಕ್:
33 ಕಿಲೋವೋಲ್ಟ್ ವಿದ್ಯುತ್ ತಂತಿ ತಗುಲಿ ಐದು ಆನೆಗಳು ಸಾವನ್ನಪ್ಪಿರುವ ದಾರುಣ ಘಟನೆ ಜಾರ್ಖಂಡ್‌ನ ಪೂರ್ವ ಸಿಂಗ್‌ಭೂಮ್ ಜಿಲ್ಲೆಯ ಮುಸಾಬಾನಿ ಅರಣ್ಯ ಪ್ರದೇಶದಲ್ಲಿ ನಡೆದಿದೆ. ಸೋಮವಾರ ರಾತ್ರಿ ಸಂಭವಿಸಿದ ಈ ದುರ್ಘಟನೆಯಲ್ಲಿ ಎರಡು ಮರಿ ಮತ್ತು ಮೂರು ವಯಸ್ಕ ಆನೆಗಳು ಉಸಿರು ಚೆಲ್ಲಿವೆ. ಜಿಲ್ಲೆಯಲ್ಲಿ ಕಳೆದ ಎರಡು ತಿಂಗಳ ಅವಧಿಯಲ್ಲಿ ಇದು ಮೂರನೇ ಬಾರಿಗೆ ವಿದ್ಯುತ್ ಸ್ಪರ್ಶವಾಗಿದ್ದು, ಸಾವಿನ ಸಂಖ್ಯೆ 7ಕ್ಕೆ ಏರಿಕೆಯಾಗಿದೆ.
ಮುಸಾಬನಿ ಅರಣ್ಯ ಪ್ರದೇಶದಲ್ಲಿ ತೋಡಿದ್ದ ಹೊಂಡವನ್ನು ದಾಟುವ ವೇಳೆ ಈ ಘಟನೆ ನಡೆದಿದೆ. ಆನೆಗಳ ಹಿಂಡು ಕೆಳಗಿಳಿಯುತ್ತಿದ್ದಂತೆ ಒಮ್ಮೆಲೇ 33 ಕಿಲೋವೋಲ್ಟ್ (ಕೆವಿ) ವಿದ್ಯುತ್ ತಂತಿ ತಗುಲಿ 5 ಆನೆಗಳು ಜೀವ ಬಿಟ್ಟಿವೆ. ಸ್ಥಳೀಯರ ಪ್ರಕಾರ, ಸೋಮವಾರ ತಡರಾತ್ರಿಯಿಂದ ಸುಮಾರು ಹನ್ನೆರಡು ಆನೆಗಳ ಗುಂಪು ಈ ಪ್ರದೇಶದಲ್ಲಿ ಸಂಚರಿಸುತ್ತಿವೆ ಎಂಬ ಮಾಹಿತಿ ಲಭ್ಯವಾಗಿದೆ.
ಅರಣ್ಯದಿಂದ ಕಟ್ಟಿಗೆ ತರುತ್ತಿದ್ದ ವೇಳೆ ಸತ್ತ ಆನೆಗಳು ಗ್ರಾಮಸ್ಥರ ಕಣ್ಣಿಗೆ ಬಿದ್ದ ಬಳಿಕ ವಿಷಯ ಬೆಳಕಿಗೆ ಬಂದಿದೆ. ಎರಡು ದಿನಗಳ ಹಿಂದೆ ಅರಣ್ಯಾಧಿಕಾರಿಗಳು ಕಾಡಿನಲ್ಲಿ ಟ್ರೆಂಚ್ ತೋಡಿದ್ದರು. ಒಳಗಿನಿಂದ ತೆಗೆದ ಮಣ್ಣನ್ನೂ ಅಲ್ಲೇ ಇಡಲಾಗಿತ್ತು. ಆನೆಗಳ ಹಿಂಡು ದಿಬ್ಬವನ್ನು ದಾಟುತ್ತಿದ್ದ ವೇಳೆ ಹೈಟೆನ್ಷನ್ ತಂತಿಗೆ ತಗುಲಿ ಐದು ಆನೆಗಳು ಸಾವನ್ನಪ್ಪಿವೆ. ಸತ್ತ ಐದು ಆನೆಗಳ ಪೈಕಿ ಎರಡು ಹೆಣ್ಣು ಆನೆಗಳು ಸೇರಿವೆ.
ಸುಮಾರು ಒಂದು ವಾರದಿಂದ ಮುಸಾಬಾನಿ ಭಾಗದಲ್ಲಿ ಆನೆಗಳ ಹಿಂಡು ಓಡಾಡುತ್ತಿದ್ದರೂ ಅರಣ್ಯಾಧಿಕಾರಿಗಳು ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಗ್ರಾಮಸ್ಥರು ಆರೋಪಿಸಿದರು. ಈ ಸಂಬಂಧ ಜಿಲ್ಲಾಧಿಕಾರಿ ಮಂಜುನಾಥ ಭಜಂತ್ರಿ ತನಿಖೆಗೆ ಆದೇಶಿಸಿದ್ದಾರೆ.