ಹೊಸದಿಗಂತ ಡಿಜಿಟಲ್ ಡೆಸ್ಕ್:
ಬಿಹಾರದಲ್ಲಿ ಇಂದು ಬೆಳಗ್ಗಿನ ಜಾವ ಶಾರ್ಟ್ ಸರ್ಕ್ಯೂಟ್‌ನಿಂದ ಮನೆಗೆ ಬೆಂಕಿ ತಗುಲಿ ಒಂದೇ ಕುಟುಂಬದ ಐವರು ಸಜೀವ ದಹನವಾಗಿರುವ ಘಟನೆ ಮುಜಫರ್‌ಪುರ್‌ನ ಮೋತಿಪುರ ಠಾಣಾ ವ್ಯಾಪ್ತಿಯ ವಾರ್ಡ್ 13ರಲ್ಲಿ ನಡೆದಿದೆ.
ಮನೆಗೆ ಏಕಾಏಕಿ ಬೆಂಕಿ ಹೊತ್ತಿಕೊಂಡಿದ್ದು, ಜ್ವಾಲೆಗಳು ಕ್ಷಣಾರ್ಧದಲ್ಲೇ ಸಂಪೂರ್ಣ ಮನೆಯನ್ನು ಆವರಿಸಿವೆ. ಕುಟುಂಬದವರಿಗೆ ಹೊರಬರಲು ಅವಕಾಶವೇ ಸಿಗದೆ ಐವರು ಸಜೀವ ದಹನರಾಗಿದ್ದರೆ. ಇನ್ನೂ ಐವರು ಗಂಭೀರವಾಗಿ ಸುಟ್ಟು ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ತಕ್ಷಣವೇ ಸ್ಥಳೀಯ ವೈದ್ಯಕೀಯ ಕಾಲೇಜಿಗೆ ದಾಖಲಿಸಲಾಗಿದ್ದು, ಅವರ ಚಿಕಿತ್ಸೆ ಮುಂದುವರಿದಿದೆ.
ಮಾಹಿತಿ ದೊರೆತ ತಕ್ಷಣ ಪೊಲೀಸರು ಹಾಗೂ ಅಗ್ನಿಶಾಮಕ ದಳ ಸ್ಥಳಕ್ಕೆ ದೌಡಾಯಿಸಿ ಬೆಂಕಿಯನ್ನು ನಿಯಂತ್ರಣಕ್ಕೆ ತಂದಿದ್ದಾರೆ. “ಶಾರ್ಟ್ ಸರ್ಕ್ಯೂಟ್‌ನಿಂದ ಬೆಂಕಿ ಕಾಣಿಸಿಕೊಂಡಿದ್ದು, ದುರದೃಷ್ಟವಶಾತ್ ಒಂದೇ ಕುಟುಂಬದ ಐವರು ಜೀವ ಕಳೆದುಕೊಂಡಿದ್ದಾರೆ,” ಎಂದು ಪಶ್ಚಿಮ ವಿಭಾಗದ ಡಿಎಸ್ಪಿ ಸುಚಿತ್ರಾ ಕುಮಾರಿ ತಿಳಿಸಿದ್ದಾರೆ.
ಬೆಂಕಿ ತಗುಲಿದ ಮನೆ ಗೆನಾ ಶಾ ಎಂಬುವರದ್ದು ಎಂದು ತಿಳಿದುಬಂದಿದೆ. ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದ್ದು, ನಂತರ ಕುಟುಂಬಕ್ಕೆ ಹಸ್ತಾಂತರಿಸುವುದಾಗಿ ಪೊಲೀಸರು ತಿಳಿಸಿದ್ದಾರೆ.

