ಹೊಸದಿಗಂತ ವರದಿ ಮಂಡ್ಯ:
ವಿ.ಸಿ. ನಾಲೆಯಲ್ಲಿ ಆಡವಾಡಲು ಹೋದ ಐವರು ನೀರುಪಾಲಾಗಿರುವ ಘಟನೆ ತಾಲೂಕಿನ ದೊಡ್ಡಕೊತ್ತಗೆರೆ ಗ್ರಾಮದ ಬಳಿ ನಡೆದಿದೆ.
ಬೆಂಗಳೂರಿನ ನೀಲಸಂದ್ರ ಬಡಾವಣೆಯ ಅನೀಷಾ ಬೇಗಂ(10), ತಸ್ಮಿಯಾ (22), ಮೆಹತಾಬ್ (10), ಅಶ್ರಕ್ (28), ಅಫೀಕಾ (22) ಮೃತ ದುರ್ದೈವಿಗಳು.
ಬೇಸಿಗೆ ರಜೆ ಹಿನ್ನೆಲೆಯಲ್ಲಿ ನಿನ್ನೆ ಅಜ್ಜಿ ಊರು ಹಲ್ಲೆಗೆರೆಗೆ ಬಂದಿದ್ದರು. ಇಂದು ದೊಡ್ಡಕೊತ್ತಗೆರೆ ಬಳಿಯ ವಿಶ್ವೇಶ್ವರಯ್ಯ ನಾಲೆ ಬಳಿ ತೆರಳಿ ನಾಲೆಯಲ್ಲಿ ಆಡವಾಡುತ್ತಿದ್ದರು. ಈಜುತ್ತಿದ್ದ ವೇಳೆ ಬಾಲಕನೋರ್ವ ನೀರಿನ ಸೆಳೆತಕ್ಕೆ ಸಿಕ್ಕಿ ಕೊಚ್ಚಿ ಹೋಗಿದ್ದಾನೆ. ಆತನನ್ನು ರಕ್ಷಿಸಲು ಹೋದ ಉಳಿದ ನಾಲ್ವರೂ ಸಹನೀರಿನಲ್ಲಿ ಕೊಚ್ಚಿಹೋಗಿ ಮುಳುಗಿ ಸಾವನ್ನಪ್ಪಿದ್ದಾರೆ.
ಸುದ್ಧಿ ತಿಳಿದ ತಕ್ಷಣ ಸ್ಥಳಕ್ಕೆ ಅಗ್ನಿಶಾಮಕ ದಳದ ಸಿಬ್ಬಂದಿ ಆಗಮಿಸಿ ಮೂವರ ಶವಗಳನ್ನು ಹೊರತೆಗೆದರು. ಇಬ್ಬರ ಶವಗಳು ನೀರನಲ್ಲಿ ಕೊಚ್ಚಿ ಹೋಗಿರುವ ಕಾರಣ ಶವಗಳಿಗಾಗಿ ಹುಡುಕಾಟ ನಡೆಸಿದ್ದಾರೆ.
ಸುದ್ಧಿ ತಿಳಿದ ತಕ್ಷಣ ಉನ್ನತ ಪೊಲೀಸ್ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಈ ಸಂಬಂಧ ಬಸರಾಳು ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು ಮುಂದಿನ ಕ್ರಮ ಕೈಗೊಂಡಿದ್ದಾರೆ.