ಹೊಸದಿಗಂತ ಡಿಜಿಟಲ್ ಡೆಸ್ಕ್:
ಪಾಕ್ ಉಗ್ರರು ಮತ್ತು ಉಗ್ರರ ನೆಲೆಗಳ ವಿರುದ್ಧ ಭಾರತ ನಡೆಸಿದ ‘ಆಪರೇಷನ್ ಸಿಂದೂರ’ ಕಾರ್ಯಾಚರಣೆಯಲ್ಲಿ ಐವರು ಯೋಧರು ಹುತಾತ್ಮರಾಗಿದ್ದಾರೆ ಎಂದು ಭಾರತೀಯ ಸೇನೆ ಅಧಿಕೃತವಾಗಿ ಮಾಹಿತಿ ನೀಡಿದೆ.
ಭಾನುವಾರ ಸಂಜೆ ಭಾರತದ ಮಿಲಿಟರಿ ಕಾರ್ಯಾಚರಣೆಗಳ ಮಹಾನಿರ್ದೇಶಕ (ಡಿಜಿಎಂಓ) ಲೆಫ್ಟಿನೆಂಟ್ ಜನರಲ್ ರಾಜೀವ್ ಘಾಯ್, ವಾಯುಪಡೆ ಕಾರ್ಯಾಚರಣೆಗಳ ಮಹಾನಿರ್ದೇಶಕ ಎಕೆ ಭಾರ್ತಿ, ವೈಸ್ ಅಡ್ಮಿರಲ್ ಎಎಸ್ ಪ್ರಮೋದ್ ಅವರು ಪಾಲ್ಗೊಂಡಿದ್ದ ಸುದ್ದಿಗೋಷ್ಠಿಯಲ್ಲಿ ಈ ವಿಚಾರವನ್ನು ತಿಳಿಸಿದರು.
ದೇಶಕ್ಕಾಗಿ ಸೇವೆ ಸಲ್ಲಿಸಿ ಹುತಾತ್ಮರಾದ ಯೋಧರಿಗೆ ಭಾರತೀಯ ಸೇನಾಪಡೆ ಗೌರವ ಸಲ್ಲಿಸುತ್ತದೆ. ಅಲ್ಲದೇ ಅವರ ತ್ಯಾಗಗಳನ್ನು ಯಾವಾಗಲೂ ಸ್ಮರಿಸಲಾಗುವುದು ಎಂದು ತಿಳಿಸಿದರು.
ಮೇ 7ರಿಂದ ಮೇ 10 ರವರೆಗೆ ಜಮ್ಮು ಕಾಶ್ಮೀರ ಗಡಿಯಲ್ಲಿ (LOC) ನಡೆದ ಗುಂಡಿನ ಚಕಮಕಿಯಲ್ಲಿ ಪಾಕಿಸ್ತಾನ ಸುಮಾರು 35ರಿಂದ 40 ಸೇನಾ ಸಿಬ್ಬಂದಿಯನ್ನು ಕಳೆದುಕೊಂಡಿದೆ. ಪಾಕಿಸ್ತಾನದ ವಿರುದ್ಧ ಭಾರತೀಯ ಸೇನೆ ದಾಳಿ ನಡೆಸಿದ ಕುರಿತು ವೀಡಿಯೋ ಸಾಕ್ಷ್ಯ ಸಮೇತ ಇಂಚಿಂಚು ಮಾಹಿತಿ ನೀಡಿದ ಲೆಫ್ಟಿನೆಂಟ್ ಜನರಲ್ ರಾಜೀವ್ ಘಾಯ್, ಮತ್ತೆ ಪಾಕ್ ದಾಳಿ ನಡೆಸಿದರೆ ತೀವ್ರವಾಗಿ ದಾಳಿ ನಡೆಸುವ ಬಗ್ಗೆ ಎಚ್ಚರಿಕೆಯ ಸಂದೇಶ ನೀಡಿದ್ದಾರೆ.