ಹೊಸದಿಗಂತ ಡಿಜಿಟಲ್ ಡೆಸ್ಕ್:
ಅಭಿಮಾನಿಗಳ ನಿರೀಕ್ಷೆಯ ಕೇಂದ್ರಬಿಂದುವಾಗಿರುವ ಯಶ್ ಅಭಿನಯದ ಮುಂದಿನ ಸಿನಿಮಾ ‘ಟಾಕ್ಸಿಕ್’ ಸುತ್ತ ಹಲವು ಸುದ್ದಿಗಳು ಹರಿದಾಡುತ್ತಿವೆ. ಇತ್ತೀಚೆಗೆ ರುಕ್ಮಿಣಿ ವಸಂತ್ ಈ ಸಿನಿಮಾದಲ್ಲಿ ನಾಯಕಿಯಾಗಿ ಸೇರಿರುವ ವಿಚಾರ ದೊಡ್ಡ ಚರ್ಚೆಗೆ ಕಾರಣವಾಗಿದ್ದರೆ, ಈಗ ಮತ್ತಷ್ಟು ವಿಶೇಷ ಮಾಹಿತಿಗಳು ಬಹಿರಂಗಗೊಂಡಿವೆ.
ಸಾಮಾನ್ಯವಾಗಿ ಸೂಪರ್‌ಹೀರೋ ಶೈಲಿಯ ಸಿನಿಮಾಗಳಲ್ಲಿ ನಾಯಕಿಯರಿಗೆ ಕೇವಲ ಅಲಂಕಾರಿಕ ಪಾತ್ರ ನೀಡಲಾಗುತ್ತದೆ ಎಂಬ ಟೀಕೆಗಳು ಕೇಳಿಬರುತ್ತವೆ. ಆದರೆ ‘ಟಾಕ್ಸಿಕ್’ ಈ ಟೀಕೆಯನ್ನು ಮುರಿಯುವ ಪ್ರಯತ್ನ ಮಾಡುತ್ತಿದೆ. ಈ ಚಿತ್ರದಲ್ಲಿ ನಾಯಕಿಯರು ಕೇವಲ ಸೈಡ್ ಕ್ಯಾರಕ್ಟರ್‌ಗಳಾಗಿ ಅಲ್ಲ, ಕಥೆಯ ಅವಿಭಾಜ್ಯ ಭಾಗವಾಗಿ ಪ್ರಬಲ ಪಾತ್ರಗಳಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ ಎಂಬುದು ಗಮನಾರ್ಹ ಸಂಗತಿ.
ಮಾಹಿತಿಯ ಪ್ರಕಾರ, ಈ ಚಿತ್ರದಲ್ಲಿ ಒಟ್ಟು ಐವರು ಹೆಸರಾಂತ ನಟಿಯರು ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಲಿದ್ದಾರೆ. ಕನ್ನಡದ ಪ್ರತಿಭಾವಂತ ನಟಿ ರುಕ್ಮಿಣಿ ವಸಂತ್ ಜೊತೆಗೆ ಬಾಲಿವುಡ್‌ನ ಜನಪ್ರಿಯ ನಟಿಯರಾದ ಕಿಯಾರಾ ಅಡ್ವಾಣಿ, ತಾರಾ ಸುತಾರಿಯಾ, ನಯನತಾರಾ ಮತ್ತು ಹ್ಯೂಮಾ ಖುರೇಷಿ ಈ ಭಾರಿ ಬಜೆಟ್ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಪ್ರತಿ ಪಾತ್ರಕ್ಕೂ ತೂಕ ನೀಡಲಾಗಿದ್ದು, ಆ್ಯಕ್ಷನ್ ಹಾಗೂ ಭಾವನಾತ್ಮಕ ಹಂದರಗಳೊಂದಿಗೆ ಪ್ರೇಕ್ಷಕರನ್ನು ಸೆಳೆಯುವ ಉದ್ದೇಶ ಚಿತ್ರತಂಡದ್ದಾಗಿದೆ. ವಿಶೇಷವಾಗಿ ರುಕ್ಮಿಣಿ ವಸಂತ್ ಅವರ ಪಾತ್ರವು ಆ್ಯಕ್ಷನ್ ದೃಶ್ಯಗಳಲ್ಲಿ ಹೆಚ್ಚಿನ ಪ್ರಾಮುಖ್ಯತೆ ಪಡೆಯಲಿದೆ ಎಂದು ಮೂಲಗಳು ಹೇಳುತ್ತಿವೆ.
ವೆಂಕಟ್ ನಾರಾಯಣ ಅವರ ಕೆವಿಎನ್ ಪ್ರೊಡಕ್ಷನ್ಸ್ ಮತ್ತು ಯಶ್ ಅವರ ಮಾನ್ಸ್ಟರ್ ಮೈಂಡ್ ಕ್ರಿಯೇಷನ್ಸ್ ಜಂಟಿಯಾಗಿ ಈ ಚಿತ್ರವನ್ನು ನಿರ್ಮಿಸುತ್ತಿದ್ದು, ಅತಿ ದೊಡ್ಡ ಮಟ್ಟದ ಹೂಡಿಕೆ ನಡೆಯುತ್ತಿದೆ. ಇಂಗ್ಲಿಷ್ ಹಾಗೂ ಕನ್ನಡ ಭಾಷೆಗಳಲ್ಲೇ ನೇರವಾಗಿ ಚಿತ್ರೀಕರಿಸಲಾಗುತ್ತಿರುವ ಈ ಚಿತ್ರವನ್ನು ಅನೇಕ ಭಾಷೆಗಳಲ್ಲಿ ಬಿಡುಗಡೆ ಮಾಡುವ ಯೋಜನೆ ರೂಪಿಸಲಾಗಿದೆ. ರಾಜೀವ್ ರೈ ಅವರ ಛಾಯಾಗ್ರಹಣ ಈ ಚಿತ್ರಕ್ಕೆ ಹೊಸ ತೇಜಸ್ಸು ನೀಡಲಿದೆ.