ಐದು ವರ್ಷಗಳಲ್ಲಿ ವಿಶೇಷ ಅನುದಾನದಲ್ಲಿ ರಾಜ್ಯಕ್ಕೆ ಆದ ಅನ್ಯಾಯ ಸರಿಪಡಿಸಿ: ಹಣಕಾಸು ಸಭೆಯಲ್ಲಿ ಸಿಎಂ ಸಿದ್ದರಾಮಯ್ಯ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಸಿಎಂ ಸಿದ್ದರಾಮಯ್ಯ ನೇತೃತ್ವದಲ್ಲಿ ಇಂದು ಹಣಕಾಸು ಸಭೆ ನಡೆದಿದೆ. 16ನೇ ಹಣಕಾಸು ಆಯೋಗದ ಮುಂದೆ ತಮ್ಮ ಬೇಡಿಕೆ ಸಲ್ಲಿಸಿದ್ದಾರೆ.

ಸಭೆಯ ಬಳಿಕ ಮಾಧ್ಯಮ ಪ್ರತಿನಿಧಿಗಳ ಜೊತೆ ಸಿಎಂ ಸಿದ್ದರಾಮಯ್ಯ ಮಾತನಾಡಿದರು.ರಾಜ್ಯಕ್ಕೆ ಕಳೆದ ಐದು ವರ್ಷಗಳಿಂದ ವಿಶೇಷ ಅನುದಾನ ಹಾಗೂ ತೆರಿಗೆ ಹಂಚಿಕೆಯಲ್ಲಿ 80,000 ಕೋಟಿ ಅನುದಾನ ಕಡಿಮೆಯಾಗಿದೆ.ಇದನ್ನು ಸರಿಪಡಿಸಬೇಕೆಂದು 16ನೇ ಹಣಕಾಸು ಆಯೋಗವನ್ನು ಕೋರಲಾಗಿದ್ದು, ಆಯೋಗವು ಸಕಾರಾತ್ಮಕವಾಗಿ ಸ್ಪಂದಿಸಿದೆ ಎಂದರು.

ಡಿವಿಸಿಬಲ್ ಪೂಲ್ ಗೆ ಸೆಸ್ ಮತ್ತು ಸರ್ಜಾಜ್ ನ್ನು ಸೇರಿಸಬೇಕೆಂದು ಹಾಗೂ ಭಾರತ ಸರ್ಕಾರಕ್ಕೆ ಬರುವ ತೆರಿಗೆಯೇತರ ಆದಾಯವನ್ನೂ ಸಹ ಡಿವಿಸಿಬಲ್ ಪೂಲ್ ಗೆ ಸೇರಿಸಬೇಕೆಂದು ಕೋರಲಾಗಿದೆ. ಕಲ್ಯಾಣ ಕರ್ನಾಟಕ ಪ್ರದೇಶಕ್ಕೆ ರಾಜ್ಯ ಸರ್ಕಾರ ಪ್ರತಿ ವರ್ಷ 5,000 ಕೋಟಿ ಯಂತೆ ಐದು ವರ್ಷಕ್ಕೆ 25,000 ಕೋಟಿ ಖರ್ಚು ಮಾಡಲಾಗುತ್ತಿದ್ದು, ಕೇಂದ್ರ ಸರ್ಕಾರವೂ ಇದಕ್ಕೆ ಅನುರೂಪದ ಅನುದಾನ ನೀಡಬೇಕೆಂದು ಕೋರಲಾಗಿದೆ ಎಂದರು.

ಇನ್ನು ಬೆಂಗಳೂರಿಗೆ ಮುಂದಿನ 5 ವರ್ಷಗಳಲ್ಲಿ 55,586 ಕೋಟಿ ರೂ. ಅನುದಾನ ಅವಶ್ಯಕತೆ ಇದೆ. ಇದರಲ್ಲಿ 27,799 ಕೋಟಿ ರೂ. ಅನುದಾನ ಕೊಡುವಂತೆ ಹಣಕಾಸು ಆಯೋಗಕ್ಕೆ ಅವರು ಮನವಿ ಮಾಡಿದ್ದಾರೆ.ಪಶ್ಚಿಮ ಘಟ್ಟ ವಿಪತ್ತು ನಿರ್ವಹಣೆಗೆ ಹೆಚ್ಚಿನ ಅನುದಾನ ನೀಡಲು ಕೋರಲಾಯಿತು.

ದೇಶದ ಜಿಡಿಪಿಗೆ ನಮ್ಮ ರಾಜ್ಯದಿಂದ ಶೇ.9 ರಷ್ಟು ಕೊಡುಗೆ ನೀಡುತ್ತಿದ್ದು, ಅದರಲ್ಲಿ ನಮಗೆ ಕೇವಲ ಶೇ. 1.5 ರಷ್ಟು ಮಾತ್ರ ರಾಜ್ಯದ ಪಾಲಿಗೆ ಬರುತ್ತಿದೆ. ಇದನ್ನು ಸರಿಪಡಿಸಲು ಕೋರಲಾಗಿದೆ. 14ನೇ ಹಣಕಾಸು ಆಯೋಗದಲ್ಲಿ ರಾಜ್ಯಕ್ಕೆ 4.713 ಪ್ರಮಾಣದ ತೆರಿಗೆ ಹಂಚಿಕೆಯಾಗುತ್ತಿತ್ತು. ಆದರೆ 15ನೇ ಹಣಕಾಸು ಆಯೋಗದಲ್ಲಿ ಈ ಪ್ರಮಾಣ 3.647 ಕ್ಕೆ ಇಳಿದಿದ್ದು, ಈ ಪ್ರಮಾಣವನ್ನೂ ಸರಿಪಡಿಸಬೇಕೆಂದು ಕೋರಲಾಗಿದೆ. ತೆರಿಗೆ ಪ್ರಮಾಣದಲ್ಲಿ 1.66% ಕಡಿಮೆಯಾಗಿರುವ ಬಗ್ಗೆ ಆಯೋಗಕ್ಕೆ ವಿವರಣೆ ನೀಡಲಾಗಿದೆ. ಗುಜರಾತಿನ ಮುಖ್ಯಮಂತ್ರಿಯಾಗಿದ್ದಾಗ ನರೇಂದ್ರ ಮೋದಿ ಅವರು ತೆರಿಗೆ ಹಂಚಿಕೆಯಲ್ಲಿ ಶೇ. 50 ರಷ್ಟು ಪಾಲಿಗೆ ಬೇಡಿಕೆಯಿಟ್ಟಿದ್ದರು. ಅನೇಕ ರಾಜ್ಯಗಳು ಈ ರೀತಿ ಬೇಡಿಕೆ ಸಲ್ಲಿಸಿರುವುದರಿಂದ, ಕರ್ನಾಟಕದ ಬೇಡಿಕೆಯನ್ನು ಈಡೇರಿಸಬಹುದೆಂಬ ವಿಶ್ವಾಸ ನನಗಿದೆ ಎಂದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!