ಹೊಸದಿಗಂತ ಡಿಜಿಟಲ್ ಡೆಸ್ಕ್:
ತಮಿಳುನಾಡಿನ ತೆಂಕಾಶಿಯಲ್ಲಿರುವ ಓಲ್ಡ್ ಕುರ್ಟಾಲಂ ಜಲಪಾತದಲ್ಲಿ ಶುಕ್ರವಾರ ಮಧ್ಯಾಹ್ನ ಹಠಾತ್ ಪ್ರವಾಹ ಸೃಷ್ಟಿಯಾಗಿದೆ. ಪರಿಣಾಮ ಸ್ನಾನಕ್ಕೆಂದು ತೆರಳಿದ್ದ 17 ವರ್ಷದ ಹುಡುಗ ನೀರಿನಲ್ಲಿ ಕೊಚ್ಚಿ ಹೋಗಿದ್ದಾನೆ.
ಈತನನ್ನು ಅಶ್ವಿನ್ ಎಂದು ಗುರುತಿಸಲಾಗಿದೆ. ಈತ ಪಳಯಂಕೊಟ್ಟೈನ NGO ಕಾಲೋನಿಯ 11 ನೇ ತರಗತಿ ವಿದ್ಯಾರ್ಥಿ. ವಿಷಯ ತಿಳಿದ ಕೂಡಲೇ ತಮಿಳುನಾಡು ಅಗ್ನಿಶಾಮಕ ಮತ್ತು ರಕ್ಷಣಾ ಇಲಾಖೆ ತಂಡವು ಜಿಲ್ಲಾಧಿಕಾರಿ ಎ.ಕೆ.ಕಮಲ್ ಕಿಶೋರ್ ಮತ್ತು ಪೊಲೀಸ್ ವರಿಷ್ಠಾಧಿಕಾರಿ ಟಿ.ಪಿ.ಸುರೇಶ್ ಕುಮಾರ್ ಅವರೊಂದಿಗೆ ರಕ್ಷಣಾ ಕಾರ್ಯಾಚರಣೆಗೆ ದೌಡಾಯಿಸಿದ್ದಾರೆ.
ಪ್ರವಾಸಿಗರ ಗುಂಪೊಂದು ಹಳೆಯ ಕುರ್ಟಾಲಂ ಜಲಪಾತದಲ್ಲಿ ಸ್ನಾನ ಮಾಡುತ್ತಿತ್ತು. ಈ ವೇಳೆ ಜಲಪಾತ ಹಠಾತ್ ಆಗಿ ತುಂಬಿ ಹರಿದಿದೆ. ಪರಿಣಾಮ ಅರಿವಿಲ್ಲದೆ ಸಿಕ್ಕಿಬಿದ್ದ ಪ್ರವಾಸಿಗರು ಸಹಾಯಕ್ಕಾಗಿ ಕಿರುಚಾಡಿದ್ದಾರೆ.
ಹಠಾತ್ ಪ್ರವಾಹದಿಂದ ಎಲ್ಲರೂ ತಮ್ಮ ತಮ್ಮ ರಕ್ಷಣೆಗೆಂದು ಓಡಿ ಬರುತ್ತಿದ್ದಾಗಲೇ ಜಲಪಾತದಿಂದ ಕಾರು ಪಾರ್ಕ್‌ಗೆ ಹೋಗುವ ಮಾರ್ಗವು ಮುಳುಗಡೆಯಾಯಿತು. ಈ ನಡುವೆ ಅಶ್ವಿನ್ ನೀರಿನಲ್ಲಿ ಕೊಚ್ಚಿ ಹೋಗಿದ್ದಾನೆ.
ರಕ್ಷಣಾ ಕಾರ್ಯಾಚರಣೆ ವೇಳೆ, ತಮಿಳುನಾಡು ಅಗ್ನಿಶಾಮಕ ಮತ್ತು ರಕ್ಷಣಾ ಇಲಾಖೆ ತಂಡವು ಜಲಪಾತದಿಂದ ಸುಮಾರು 500 ಮೀಟರ್ ದೂರದಲ್ಲಿ ಕಲ್ಲುಗಳ ನಡುವೆ ಸಿಲುಕಿರುವ ಅಶ್ವಿನ್ ದೇಹವನ್ನು ಪತ್ತೆ ಮಾಡಿದೆ.
ಸದ್ಯ ಸ್ಥಳೀಯ ಆಡಳಿತವು ಜಲಪಾತಕ್ಕೆ ಸಾರ್ವಜನಿಕರು ಪ್ರವೇಶಿಸುವುದನ್ನು ತಾತ್ಕಾಲಿಕವಾಗಿ ನಿಷೇಧಿಸಿದೆ.