ಹೊಸದಿಗಂತ ಡಿಜಿಟಲ್ ಡೆಸ್ಕ್:
ಉತ್ತರಾಖಂಡದ ಉತ್ತರಕಾಶಿ ಜಿಲ್ಲೆಯಲ್ಲಿ ಸಂಭವಿಸಿದ ಮೇಘಸ್ಫೋಟದಿಂದ ಹಠಾತ್ ಪ್ರವಾಹ ಉಂಟಾಗಿ 9 ಕಾರ್ಮಿಕರು ನಾಪತ್ತೆಯಾಗಿರುವ ಘಟನೆ ಸಂಭವಿಸಿದೆ. ಬಾರ್ಕೋಟ್-ಯಮುನೋತ್ರಿ ರಸ್ತೆಯ ಬಳಿ ನಿರ್ಮಾಣ ಹಂತದಲ್ಲಿದ್ದ ಹೋಟೆಲ್‌ವೊಂದರಲ್ಲಿ ಇದ್ದ ಕಾರ್ಮಿಕರು ಪ್ರವಾಹಕ್ಕೆ ಕೊಚ್ಚಿಹೋಗಿರುವ ಶಂಕೆ ವ್ಯಕ್ತವಾಗಿದೆ.
ಸ್ಥಳಕ್ಕೆ ತುರ್ತು ರಕ್ಷಣಾ ಸಿಬ್ಬಂದಿ ಆಗಮಿಸಿದ್ದು, ಎನ್‌ಡಿಆರ್‌ಎಫ್ ಮತ್ತು ಎಸ್‌ಡಿಆರ್‌ಎಫ್ ತಂಡಗಳು ಜಂಟಿಯಾಗಿ ಶೋಧ ಕಾರ್ಯಾಚರಣೆಯಲ್ಲಿ ತೊಡಗಿವೆ. ನಿರಂತರ ಮಳೆಯೊಂದಿಗೆ ಮೇಘಸ್ಫೋಟದಿಂದಾಗಿ ಪರಿಸ್ಥಿತಿ ಮತ್ತಷ್ಟು ಗಂಭೀರವಾಗಿದ್ದು, ಕಾರ್ಮಿಕರ ಪತ್ತೆಗೆ ಇಡೀ ಪ್ರದೇಶದಲ್ಲಿ ಶೋಧ ಕಾರ್ಯ ನಡೆಯುತ್ತಿದೆ.
ಈ ಭಾರೀ ಮಳೆಯ ಪರಿಣಾಮ ಚಾರ್‌ಧಾಮ್ ಯಾತ್ರೆ ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ. ಗಂಗೋತ್ರಿ, ಯಮುನೋತ್ರಿ, ಕೇದಾರನಾಥ ಮತ್ತು ಬದ್ರಿನಾಥಕ್ಕೆ ಹೋಗುವ ಎಲ್ಲಾ ಯಾತ್ರಾ ಮಾರ್ಗಗಳನ್ನು ಮುಚ್ಚಲಾಗಿದೆ. ಯಮುನಾ ನದಿಯಲ್ಲಿ ನೀರಿನ ಮಟ್ಟ ಅಪಾಯದ ಹಂತ ಮೀರಿ ಹರಿಯುತ್ತಿದ್ದು, ಪ್ರವಾಹದ ಆತಂಕ ಹೆಚ್ಚಾಗಿದೆ.
ಕೇದಾರನಾಥ ಯಾತ್ರೆಗೆ ಹೋಗುವ ಪ್ರಮುಖ ರಸ್ತೆವಾದ ಸೋನ್‌ಪ್ರಯಾಗ್-ಮುಂಕಟಿಯಾ ಮಾರ್ಗ ಮಣ್ಣಿನ ಕುಸಿತದಿಂದ ಬಂದ್ ಆಗಿದ್ದು, ಭಕ್ತರ ಸುರಕ್ಷತೆ ದೃಷ್ಟಿಯಿಂದ ಪ್ರವೇಶ ನಿರ್ಬಂಧಿಸಲಾಗಿದೆ. ಹವಾಮಾನ ಇಲಾಖೆ ಮತ್ತಷ್ಟು ಮಳೆಯ ಮುನ್ಸೂಚನೆ ನೀಡಿರುವ ಹಿನ್ನೆಲೆಯಲ್ಲಿ ಯಾತ್ರಾರ್ಥಿಗಳು ತಾತ್ಕಾಲಿಕವಾಗಿ ತಮ್ಮ ಪ್ರಯಾಣ ಮುಂದೂಡಿಕೊಳ್ಳಬೇಕೆಂದು ಅಧಿಕಾರಿಗಳು ಸೂಚನೆ ನೀಡಿದ್ದಾರೆ.