ಹೊಸದಿಗಂತ ಡಿಜಿಟಲ್ ಡೆಸ್ಕ್:
ಅಮೆರಿಕದ ಟೆಕ್ಸಾಸ್ ರಾಜ್ಯದ ಗ್ವಾಡಾಲುಪೆ ನದಿಯ ಬಳಿ ಸಂಭವಿಸಿದ ಹಠಾತ್ ಪ್ರವಾಹದ ಕಾರಣ ಭೀಕರ ದುರಂತ ಸಂಭವಿಸಿದೆ. ಈ ಪ್ರವಾಹದಲ್ಲಿ 15 ಮಕ್ಕಳು ಸೇರಿ 43 ಮಂದಿ ಮೃತಪಟ್ಟಿದ್ದು, ಬೇಸಿಗೆ ಶಿಬಿರಕ್ಕೆ ಹೋಗಿದ್ದ 27 ವಿದ್ಯಾರ್ಥಿನಿಯರು ನಾಪತ್ತೆಯಾಗಿದ್ದಾರೆ. ಈ ಘಟನೆಯು ಇದೀಗ ರಾಷ್ಟ್ರೀಯ ಮಟ್ಟದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದೆ.
ಪ್ರವಾಹದ ತೀವ್ರತೆಗೆ ಕಾರಣವಾಗಿದ್ದು, ಅತೀ ಕಡಿಮೆ ಅವಧಿಯಲ್ಲಿ 15 ಇಂಚುಗಳಷ್ಟು ಮಳೆಯಾಗಿದ್ದು, ನದಿಯ ನೀರು 29 ಅಡಿಗಳಿಗೆ ಏರಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಈ ಪ್ರವಾಹದಲ್ಲಿ ಒಟ್ಟು 850ಕ್ಕೂ ಹೆಚ್ಚು ಜನರನ್ನು ರಕ್ಷಿಸಲಾಗಿದ್ದು, ಇನ್ನೂ ಹಲವರು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಗೊಳ್ಳುತ್ತಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಮೆಟಿಯೋರೊಲಾಜಿಕಲ್ ಡಿಪಾರ್ಟ್‌ಮೆಂಟ್ ಈ ಪ್ರದೇಶದಲ್ಲಿ ಮಳೆಯ ಪ್ರಮಾಣ ಕಡಿಮೆ ಇರುತ್ತದೆ ಎಂಬ ಮುನ್ಸೂಚನೆ ನೀಡಿದ್ದರೂ, ಈ ಬಾರಿ ತೀವ್ರ ಮಳೆಯಾಗಿ ಮುನ್ನೆಚ್ಚರಿಕೆ ಕಾಳಜಿ ತೆಗೆದುಕೊಳ್ಳಲಾಗಿಲ್ಲ. ಇದರಿಂದ ಪ್ರವಾಹದ ತೀವ್ರತೆಯು ಸ್ಥಳೀಯ ಆಡಳಿತಕ್ಕೂ ಅನಿರೀಕ್ಷಿತವಾಗಿಯೇ ಬಂದಿದೆ.
ಕೆರ್ ಕೌಂಟಿ ಸೇರಿದಂತೆ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಪ್ರವಾಹದ ಪ್ರಮಾಣ ಈಗ ಸ್ವಲ್ಪ ಮಟ್ಟಿಗೆ ಇಳಿಕೆಗೊಂಡಿದ್ದರೂ, ಇನ್ನೂ ಹಲವೆಡೆ ಪರಿಸ್ಥಿತಿ ಚಿಂತಾಜನಕವಾಗಿದೆ. ಸಂತ್ರಸ್ತರಿಗಾಗಿ ತುರ್ತು ಶಿಬಿರಗಳು ಸ್ಥಾಪಿಸಲಾಗಿದ್ದು, ನಾಪತ್ತೆಯಾದವರಿಗಾಗಿ ಹುಡುಕಾಟ ಮುಂದುವರೆದಿದೆ.