ಹೊಸದಿಗಂತ ಡಿಜಿಟಲ್ ಡೆಸ್ಕ್:
ಕತಾರ್ ರಾಜಧಾನಿ ದೋಹಾದಿಂದ (Doha) ಐರ್ಲೆಂಡ್ ರಾಜಧಾನಿ ಡಬ್ಲಿನ್ಗೆ (Dublin) ತೆರಳುತ್ತಿದ್ದ ವಿಮಾನವು ಟರ್ಬುಲೆನ್ಸ್ (ಪ್ರಕ್ಷುಬ್ಧತೆ) ಗೆ ಸಿಲುಕಿದ್ದು, 12 ಮಂದಿ ಗಾಯಗೊಂಡಿದ್ದಾರೆ.
ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ತಿಳಿದುಬಂದಿದೆ.
ದೋಹಾದಿಂದ ಡಬ್ಲಿಂಗ್ಗೆ ಹೊರಟಿದ್ದ ವಿಮಾನವು ಹವಾಮಾನ ವೈಪರೀತ್ಯದಿಂದಾಗಿ ಪ್ರಕ್ಷುಬ್ಧತೆಗೆ ಸಿಲುಕಿತು. ವಿಮಾನದಲ್ಲಿ ಏಕಾಏಕಿ ಪ್ರಕ್ಷುಬ್ಧತೆ ಉಂಟಾದ ಕಾರಣ ಲಗೇಜ್ಗಳು ಪ್ರಯಾಣಿಕರ ಮೇಲೆ ಬಿದ್ದಿವೆ. ಪ್ರಕ್ಷುಬ್ಧತೆಯ ಹಿನ್ನೆಲೆಯಲ್ಲಿ 6 ಪ್ರಯಾಣಿಕರು ಹಾಗೂ 6 ಸಿಬ್ಬಂದಿಗೆ ಗಾಯಗಳಾಗಿವೆ.
ಮಧ್ಯಾಹ್ನ 1 ಗಂಟೆ ಸುಮಾರಿಗೆ ವಿಮಾನವು ಡಬ್ಲಿನ್ನಲ್ಲಿ ಲ್ಯಾಂಡ್ ಆಯಿತು. ಲ್ಯಾಂಡ್ ಆದ ಕೂಡಲೇ ಪ್ರಯಾಣಿಕರು ಹಾಗೂ ಸಿಬ್ಬಂದಿಯನ್ನು ಆಸ್ಪತ್ರೆಗೆ ರವಾನಿಸಲಾಯಿತು;ಎಂದು ವಿಮಾನ ನಿಲ್ದಾಣದ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಬ್ರಿಟನ್ ರಾಜಧಾನಿ ಲಂಡನ್ನಿಂದ ಸಿಂಗಾಪುರಕ್ಕೆ ತೆರಳುತ್ತಿದ್ದ ವಿಮಾನದಲ್ಲಿ ಪ್ರಕ್ಷುಬ್ಧತೆ ಉಂಟಾಗಿ ಒಬ್ಬರು ಮೃತಪಟ್ಟು 30 ಜನ ಗಾಯಗೊಂಡಿರುವ ಘಟನೆ ಮಂಗಳವಾರ (ಮೇ 21) ನಡೆದಿತ್ತು. ಬಳಿಕ ಈ ಸಿಂಗಾಪುರ ಏರ್ಲೈನ್ಸ್ ವಿಮಾನವನ್ನು ಬ್ಯಾಂಕಾಕ್ನ ಸುವರ್ಣಭೂಮಿ ಏರ್ಪೋರ್ಟ್ನಲ್ಲಿ ತುರ್ತು ಲ್ಯಾಂಡ್ ಮಾಡಲಾಗಿತ್ತು. ಕೂಡಲೇ ವೈದ್ಯರು ಧಾವಿಸಿ ಪ್ರಯಾಣಿಕರಿಗೆ ಅಗತ್ಯ ನೆರವು ನೀಡಿದ್ದರು. ವಿಮಾನದೊಳಗಿನ ಫೋಟೊಗಳು ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದ್ದು ಘಟನೆಯ ಭೀಕರತೆಗೆ ಸಾಕ್ಷಿಯಾಗಿದ್ದವು.