ಹೊಸದಿಗಂತ ಡಿಜಿಟಲ್ ಡೆಸ್ಕ್:
ಮಹಾರಾಷ್ಟ್ರದಲ್ಲಿ ಭಾರಿ ಮಳೆಯಾದ ಪರಿಣಾಮ ಕೃಷ್ಣಾ ನದಿ ಅಪಾಯದ ಮಟ್ಟ ಮೀರಿ ಹರಿಯುತ್ತಿದೆ. ಕೃಷ್ಣಾ ನದಿ ಉಕ್ಕಿ ಹರಿಯುತ್ತಿರುವುದರಿಂದ ಇದ ಉಪ ನದಿಗಳಾದ ಘಟಪ್ರಭಾ ಮತ್ತು ಮಲಪ್ರಭಾ ನದಿಗಳು ತುಂಬಿ ಹರಿಯುತ್ತಿವೆ. ಇದರಿಂದಾಗಿ ಬಾಗಲಕೋಟೆ ಜಿಲ್ಲೆಯಲ್ಲಿ ಪ್ರವಾಹ ಪರಿಸ್ಥಿತಿ ಉಂಟಾಗಿದೆ.
ಮುಧೋಳ ತಾಲೂಕಿನ ಚಿಚಖಂಡಿ ಗ್ರಾಮದ ಬಳಿಯ ಸೇತುವೆ ಜಲಾವೃತಗೊಂಡಿದ್ದು, ಮುಧೋಳ, ಜಮಖಂಡಿ ಮಾರ್ಗವಾಗಿ ಸಾಂಗ್ಲಿ ರಸ್ತೆ ಸಂಪರ್ಕ ಕಡಿತಗೊಂಡಿದೆ. ಚಿಚಖಂಡಿ ಸೇತುವೆ ಅಕ್ಕಪಕ್ಕದ ನೂರಾರು ಎಕರೆ ಕಬ್ಬು ಜಲಾವೃತಗೊಂಡಿದೆ.
ಮಂಗಳವಾರ ಬೆಳಗ್ಗೆ ಕಲಾದಗಿ-ಅಂಕಲಗಿ ಬ್ರಿಡ್ಜ್ ಕಂ ಬ್ಯಾರೇಜ ಸೇತುವೆ ಮೇಲೆ ನೀರು ಹರಿದಿದೆ. ಇದರಿಂದ 20ಕ್ಕೂ ಹೆಚ್ಚು ಗ್ರಾಮಗಳ ರಸ್ತೆ ಸಂಪರ್ಕ ಕಡಿತವಾಗಿದೆ. ಕಾತರಕಿ, ಆಲಗುಂಡಿ, ಕುಂದರಗಿ, ಅರಕೇರಿ ಭಾಗದ ಸಂಪರ್ಕ ಕಡಿತಗೊಂಡಿದೆ. ಈ ಗ್ರಾಮಗಳಿಗೆ ತೆರಳುವವರು 15 ಕಿ.ಮೀ ಸುತ್ತುವರೆದು ಸಾಗಬೇಕಾಗುವ ಪರಿಸ್ಥಿತಿ ಬಂದಿದೆ.