ಹೊಸದಿಗಂತ ಡಿಜಿಟಲ್ ಡೆಸ್ಕ್:
ಬಿಪರ್‌ಜೋಯ್ ಚಂಡಮಾರುತದ ಪ್ರಭಾವದಿಂದ ಭಾರೀ ಮಳೆಯಿಂದಾಗಿ ರಾಜಸ್ಥಾನ ರಾಜ್ಯದಲ್ಲಿ ಪ್ರವಾಹ ಉಂಟಾಗಿದೆ. ರಾಜಸ್ಥಾನದ ಬಾರ್ಮರ್ ಮತ್ತು ರಾಜ್‌ಸಮಂದ್ ಜಿಲ್ಲೆಗಳಲ್ಲಿ ಸಂಭವಿಸಿದ ಪ್ರವಾಹದಿಂದಾಗಿ ಮಹಿಳೆ ಸೇರಿದಂತೆ ನಾಲ್ವರು ಸಾವನ್ನಪ್ಪಿದ್ದಾರೆ. ರಾಜ್ಯ ವಿಪತ್ತು ಪರಿಹಾರ ಪಡೆ (ಎಸ್‌ಡಿಆರ್‌ಎಫ್) ಕಮಾಂಡೆಂಟ್ ರಾಜ್‌ಕುಮಾರ್ ಗುಪ್ತಾ ಮಾತನಾಡಿ, ಭಿನ್ಮಾಲ್ ಪಟ್ಟಣದ ಪ್ರವಾಹ ಪೀಡಿತ ಓಡ್ ಬಸ್ತಿಯಲ್ಲಿ ಸಿಲುಕಿರುವ 39 ನಾಗರಿಕರನ್ನು ರಕ್ಷಿಸಿ ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಲಾಗಿದೆ ಎಂದರು.
ಬಾರ್ಮರ್ ಜಿಲ್ಲೆಯ ಧೌರಿಮನ್ನಾ ಪಟ್ಟಣದ ತಗ್ಗು ಪ್ರದೇಶಗಳಲ್ಲಿ ಪ್ರವಾಹ ನೀರು ನಿಂತಿದ್ದು, ಮನೆಗಳಲ್ಲಿ ಸಿಲುಕಿದ್ದ 20 ಜನರನ್ನು ರಕ್ಷಣಾ ಕಾರ್ಯಕರ್ತರು ರಕ್ಷಿಸಿದ್ದಾರೆ. ಭಾನುವಾರ ಬೆಳಗ್ಗೆ ಗಂಗಾಸಾರ ಗ್ರಾಮದ ಕೊಳದಲ್ಲಿ ಇಬ್ಬರು ಸಹೋದರರು ಮುಳುಗಿ ಸಾವನ್ನಪ್ಪಿದ್ದಾರೆ ಎಂದು ಬಾರ್ಮರ್ ಸೇವಾ ಪೊಲೀಸ್ ಠಾಣಾಧಿಕಾರಿ ಹಂಸರಾಮ್ ತಿಳಿಸಿದ್ದಾರೆ. ಮೃತ ದೇಹಗಳನ್ನು ಹೊರತೆಗೆದು ಮತ್ತು ಮರಣೋತ್ತರ ಪರೀಕ್ಷೆ ನಂತರ ಅವರನ್ನು ಕುಟುಂಬ ಸದಸ್ಯರಿಗೆ ಹಸ್ತಾಂತರಿಸಲಾಯಿತು. ಬಾಘೋಟಾ ಗ್ರಾಮದಲ್ಲಿ ಭಾರೀ ಮಳೆಗೆ ಪ್ರೇಮಸಿಂಗ್ ರಜಪೂತ್ (45) ಸಾವನ್ನಪ್ಪಿದ್ದಾರೆ. ಕೆಲ್ವಾ ಪೊಲೀಸ್ ಠಾಣೆ ವ್ಯಾಪ್ತಿಯ ಗ್ರಾಮದ ಮನೆಯೊಂದರ ಬಾಲ್ಕನಿಯಿಂದ ಬಿದ್ದು ಲಾಲಿ ಬಾಯಿ (48) ಮೃತಪಟ್ಟಿದ್ದಾರೆ ಎಂದು ರಾಜಸಮಂದ್ ಪೊಲೀಸ್ ನಿಯಂತ್ರಣ ಕೊಠಡಿ ತಿಳಿಸಿದೆ.
ಮುಂದಿನ 20 ಗಂಟೆಗಳಲ್ಲಿ ಬಿಪರ್‌ಜೋಯ್‌ನಿಂದ ಭಾರಿ ಮಳೆಯಾಗುವ ಸಾಧ್ಯತೆಯಿರುವುದರಿಂದ ತಮ್ಮ ಪರಿಹಾರ ಕಾರ್ಯಕರ್ತರು ಹೆಚ್ಚಿನ ಜಾಗರೂಕರಾಗಿದ್ದಾರೆ ಎಂದು ರಾಜಸ್ಥಾನ ವಿಪತ್ತು ಸಹಾಯಕ ಕಾರ್ಯದರ್ಶಿ ಪಿ ಸಿ ಕಿಶನ್ ಹೇಳಿದ್ದಾರೆ. ಪಿಂಡ್ವಾರಾ, ಅಬು ರೋಡ್ ಮತ್ತು ರೇವಾರ್‌ನಲ್ಲಿರುವ ಅನೇಕ ಅಣೆಕಟ್ಟುಗಳು ಈಗ ಪ್ರವಾಹ ನೀರಿನಿಂದ ತುಂಬಿವೆ. ಸಿರೋಹಿಯ ಬತಿಸಾ ಅಣೆಕಟ್ಟಿನ ನೀರಿನ ಮಟ್ಟ 315 ಮೀಟರ್ ಆಗಿದ್ದು, ಅಣೆಕಟ್ಟಿನಿಂದ ನೀರು ಬಿಡಲಾಗುತ್ತಿದೆ.
ಮುಂದಿನ 24 ಗಂಟೆಗಳಲ್ಲಿ ಅಜ್ಮೀರ್ ಮತ್ತು ಉದಯಪುರ ಜಿಲ್ಲೆಯ ಕೆಲವು ಭಾಗಗಳಲ್ಲಿ ಅತಿ ಹೆಚ್ಚು ಮಳೆಯಾಗುವ ಸಾಧ್ಯತೆಯಿದೆ ಇರುವುದರಿಂದ ರೆಡ್ ಅಲರ್ಟ್ ಘೋಷಿಸಲಾಗಿದೆ. ಅಜ್ಮೀರ್, ಭಿಲ್ವಾರಾ, ಚಿತ್ತೋರ್‌ಗಢ, ಡುಂಗರ್‌ಪುರ್, ಟೋಂಕ್, ಬುಂದಿ, ಜೈಪುರ, ನಾಗೌರ್, ಜಲೋರ್ ಪ್ರದೇಶಗಳಲ್ಲಿ ಭಾರೀ ಮಳೆಯಾಗಲಿದೆ ಎಂದು ಅಧಿಕಾರಿಗಳು ವಿವರಿಸಿದ್ದಾರೆ. ಹನುಮಾನ್‌ಗಢ, ಗಂಗಾನಗರ, ಚುರು ಮತ್ತು ಬಿಕಾನೇರ್‌ನಲ್ಲಿಯೂ ಸಹ ಸಾಧಾರಣ ಮಳೆಯಾಗುವ ಸಾಧ್ಯತೆಯಿದೆ ಎಂದು ಶರ್ಮಾ ಹೇಳಿದ್ದಾರೆ.