ಹೊಸದಿಗಂತ ಡಿಜಿಟಲ್ ಡೆಸ್ಕ್:
ದಕ್ಷಿಣ ಭಾರತದ ಪ್ರಮುಖ ತೀರ್ಥಕ್ಷೇತ್ರಗಳಲ್ಲಿ ಒಂದಾದ ಶಬರಿಮಲೆ, ಈ ಬಾರಿ ಹಿಂದಿನ ಯಾವ ಸಂದರ್ಭಕ್ಕೂ ಹೋಲಿಕೆಯಿಲ್ಲದ ರೀತಿಯಲ್ಲಿ ಭಕ್ತರ ಪ್ರವಾಹ ಕಾಣುತ್ತಿದೆ. ಮಂಡಲ ಪೂಜೆ ಆರಂಭವಾದ ಕ್ಷಣದಿಂದಲೇ ಭಕ್ತಸಾಗರವೇ ಅಯ್ಯಪ್ಪನ ಸನ್ನಿಧಿಗೆ ಹರಿದು ಬರುತ್ತಿದೆ. ಕಣ್ಣು ಬೀಳುವ ತನಕ ಕಾಣುವದು ಜನರ ದಟ್ಟಣೆ ಭಕ್ತರ ನಂಬಿಕೆಗೆ ಸಾಕ್ಷಿಯಾಗಿದೆ.
ಕಳೆದ ಭಾನುವಾರ ದೇಗುಲದ ಗೋಪುರ ತೆರೆದ ನಂತರ ಕೇವಲ ಮೂರು ದಿನಗಳಲ್ಲಿ 3 ಲಕ್ಷಕ್ಕೂ ಹೆಚ್ಚು ಭಕ್ತರು ಸ್ವಾಮಿದರ್ಶನ ಪಡೆದಿದ್ದಾರೆ. ಆದರೆ ಈ ಅಪಾರ ದಟ್ಟಣೆಯ ಮಧ್ಯೆ ಪರಿಸ್ಥಿತಿ ನಿಗ್ರಹಕ್ಕೆ ಬಾರದಂತಾಗಿದೆ. ದರ್ಶನಕ್ಕಾಗಿ ಕನಿಷ್ಠ 14 ಗಂಟೆಗಳ ಕಾಲ ಸರತಿಯಲ್ಲಿ ನಿಲ್ಲುವ ಸ್ಥಿತಿ ನಿರ್ಮಾಣವಾಗಿದ್ದು, ಮಹಿಳೆಯರು ಮತ್ತು ಮಕ್ಕಳು ಹೆಚ್ಚು ತೊಂದರೆಯನ್ನು ಅನುಭವಿಸುತ್ತಿದ್ದಾರೆ. ಕುಡಿಯುವ ನೀರು, ಆಹಾರ ಮತ್ತು ಸ್ವಚ್ಛತೆ ಸೌಲಭ್ಯಗಳ ಕೊರತೆಯಿಂದ ಭಕ್ತರು ಪರದಾಡುತ್ತಿದ್ದಾರೆ.
ಇದಲ್ಲದೆ, ಜನಜಂಗುಳಿಯಲ್ಲಿ ಉಂಟಾದ ನೂಕುನುಗ್ಗಲು ಮತ್ತು ಉಸಿರಾಟದ ಸಮಸ್ಯೆಯಿಂದ 58 ವರ್ಷದ ಮಹಿಳೆಯೊಬ್ಬರು ಮೃತಪಟ್ಟಿದ್ದಾರೆ. ರಸ್ತೆ ಮಾರ್ಗದಲ್ಲೂ ಗೊಂದಲ ಹೆಚ್ಚಿದ್ದು, ನೀಲ್‌ಕಲ್ ಪ್ರದೇಶದಲ್ಲಿ ವಾಹನ ಪಾರ್ಕಿಂಗ್ ಜಾಮ್ ಆಗಿದೆ. ಕೆಲವು ಭಕ್ತರು ಪಾರ್ಕಿಂಗ್‌ಗಾಗಿ ಗಂಟೆಗಳ ಕಾಲ ತೊಂದರೆ ಅನುಭವಿಸುತ್ತಿದ್ದಾರೆ.

